ಮಟ ಮಟ ಮಧ್ಯಾಹ್ನ ಬ್ಯಾಂಕ್ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರವಾಹನ ಕಳ್ಳತನ
ಸಕಲೇಶಪುರ: ತಾಲೂಕಿನ ಹೆತ್ತೂರು ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂಭಾಗ ಗುರುವಾರ ಮಧ್ಯಾಹ್ನ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದು ಕಳ್ಳತನವಾಗಿರುವ ಘಟನೆ ನಡೆದಿದೆ.
ಹೆತ್ತೂರು ಗ್ರಾಮದ ಶರತ್ ರಾಮೇಗೌಡ ಎಂಬುವರು ಗುರುವಾರ ಮಧ್ಯಾಹ್ನ ಸ್ಕೂಟಿಯಲ್ಲಿ ಬಂದು ಬ್ಯಾಂಕ್ ನ ಮುಂಭಾಗ ವಾಹನವನ್ನು ನಿಲ್ಲಿಸಿ ವ್ಯವಹಾರಕ್ಕೆಂದು ಬ್ಯಾಂಕ್ ಗೆ ತೆರಳಿದ್ದರು. ಈ ಸಮಯದಲ್ಲಿ ಒಬ್ಬ ಕಳ್ಳ ಶರತ್ ಚಲನವಲನಗಳನ್ನು ಗಮನಿಸಿ ಇನ್ನೊಬ್ಬನಿಗೆ ಮಾಹಿತಿ ನೀಡಿದ್ದು ಮತ್ತೋರ್ವ ಬಂದು ದ್ವಿಚಕ್ರ ವಾಹನವನ್ನು ದೂಕಿಕೊಂಡು ಹತ್ತಿರದ ಗ್ಯಾರೇಜಿಗೆ ಹೋಗಿ ದ್ವಿಚಕ್ರವಾಹನದ ಕೀ ಕಳೆದುಹೋಗಿದೆ ಎಂದು ವಾಹನದ ಲಾಕ್ ತೆಗೆಸಿ ಸ್ಥಳದಿಂದ ಸ್ಕೂಟಿಯೊಂದಿಗೆ ಐಗೂರು ರಸ್ತೆ ಕಡೆ ಪರಾರಿಯಾಗಿದ್ದಾನೆ. ಗ್ರಾಮದ ವೃತ್ತದಲ್ಲಿರುವ ಸಿ.ಸಿ ಟಿವಿ ಕಾರ್ಯನಿರ್ವಹಿಸದ ಕಾರಣ ಈ ರೀತಿಯ ಘಟನೆ ಪದೇ ಪದೇ ನಡೆಯುತ್ತಿರುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.