ಹೊಸ ವರ್ಷಕ್ಕೆ ಸಕಲೇಶಪುರದಲ್ಲಿ ಚಾರಣ ನಿಷೇಧ – ವಲಯ ಅರಣ್ಯ ಅಧಿಕಾರಿ ಶಿಲ್ಪರಿಂದ ಖಡಕ್ ವಾರ್ನಿಂಗ್
ಸಕಲೇಶಪುರ: ಹೊಸ ವರ್ಷಾಚರಣೆಗಾಗಿ ಬರುವಂತಹ ಪ್ರವಾಸಿಗರು ಪಶ್ಚಿಮಘಟ್ಟದ ಅರಣ್ಯ, ಸೋಲಾ ಗುಡ್ಡಗಳಿಗೆ ಚಾರಣ ಹೋಗುವುದು, ವಾಹನಗಳಲ್ಲಿ ಹೋಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ಶಿಲ್ಪಾ ತಿಳಿಸಿದ್ದಾರೆ.
ಶನಿವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ವರ್ಷಾಚರಣೆ ಹೆಸರಿನಲ್ಲಿ ರಕ್ಷಿತ ಅರಣ್ಯದೊಳಗೆ ಹೋಗಿ ಮೋಜು ಮಾಡುವುದು, ಅಲ್ಲಿಯ ಪರಿಸರದೊಳಗೆ ಮದ್ಯದ ಬಾಟಲ್‌ಗಳು, ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯಗಳು ಹಾಕಿ ಮಾಲಿನ್ಯ ಮಾಡುವುದು ಕಂಡು ಬಂದರೆ ಯಾವುದೇ ಮುಲಾಜಿಲ್ಲದೆ ಪ್ರಕರಣ ದಾಖಲು ಮಾಡಲಾಗುವುದು. ಪ್ರವಾಸಿಗರನ್ನು ಕರೆದುಕೊಂಡು ಬರುವಂತಹ ರೆಸಾರ್ಟ್ ಹಾಗೂ ಹೋಂ ಸ್ಟೇ ಮಾಲೀಕರ ವಿರುದ್ಧ ಕೂಡ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅರಣ್ಯ ಒತ್ತುವರಿ ಮಾಡಿ ಈಗಾಗಲೆ ರೆಸಾರ್ಟ್ ಹೋಂ ಸ್ಟೇ ಮಾಡಿರುವ ಹಾಗೂ ಅರಣ್ಯದ ಅಂಚಿನಲ್ಲಿ ಇರುವ ರೆಸಾರ್ಟ್ ಹೋಂ ಸ್ಟೇಗಳಲ್ಲಿ ಭಾರೀ ಶಬ್ದ ಮಾಡುವ ಡಿಜೆಗಳನ್ನು ಬಳಸಿ ಶಬ್ದ ಮಾಲಿನ್ಯ ಉಂಟುಮಾಡಿದರೆ ಅಂತವರ ವಿರುದ್ಧ ಕೂಡ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದಿದ್ದಾರೆ.