ಮಾಸಿಕ ಸಂತೆ; ಸ್ತ್ರೀ ಸಬಲೀಕರಣಕ್ಕೆ ದಾರಿ – ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಆದಿತ್ಯ ಹಾನುಬಾಳು ಹೋಬಳಿ ದೇವಾಲದಕೆರೆಯಲ್ಲಿ ನಾಲ್ಕನೇ ಮಾಸಿಕ ಸಂತೆ ಆಯೋಜನೆ.
ಸಕಲೇಶಪುರ: ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರು ತಯಾರಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡಲು ವೇದಿಕೆ ಕಲ್ಪಿಸಿ, ಅವರು ಆರ್ಥಿಕವಾಗಿ ಅಭಿವೃದ್ಧಿ ಪಡಿಸಲು ಉತ್ತೇಜನ ನೀಡುವುದಕ್ಕಾಗಿ ಜಿಲ್ಲಾ ಪಂಚಾಯಿತಿಯು ‘ಮಾಸಿಕ ಸಂತೆ’ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಆದಿತ್ಯ ಹೇಳಿದರು.
ಶನಿವಾರ ಹಾನುಬಾಳು ಹೋಬಳಿಯ ದೇವಾಲದಕೆರೆಯಲ್ಲಿ ಮಾಸಿಕ ಸಂತೆ ಉದ್ಘಾಟಿಸಿ ಮಾತನಾಡಿದರು,ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ (ಎನ್‌ಆರ್‌ಎಲ್‌ಎಂ) ಸಂಜೀವಿನಿ ಯೋಜನೆಯಡಿ ಆರ್ಥಿಕ ನೆರವು ಪಡೆದಿರುವ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿರುವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಈ ಸಂತೆಯನ್ನು ಆಯೋಜಿಸಲಾಗುತ್ತಿದೆ.ಎನ್ಆರ್‌ಎಲ್‌ಎಂ ಸಂಜೀವಿನಿ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆದಿರುವ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಮನೆಗಳಲ್ಲಿಯೇ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಈ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಮಾಸಿಕ ಸಂತೆಯನ್ನು ಆರಂಭಿಸಲು ಸರ್ಕಾರ ಸೂಚಿಸಿದೆ ಎಂದರು. ಈ ಯೋಜನೆಯಡಿಯಲ್ಲಿ ತಾಲೂಕಿನಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಕಳೆದ ಎರಡು ವರ್ಷಗಳಿಂದ ಸರ್ಕಾರದಿಂದ 5 ಕೋಟಿಗೂ ಹೆಚ್ಚು ಆರ್ಥಿಕ ನಿಧಿ ಬಂದಿದೆ. ಇದರ ಸದುಪಯೋಗ ಪಡೆದುಕೊಂಡು ಮಹಿಳೆಯರು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಕರೆ ನೀಡಿದರು.
ತಾಲೂಕಿನಲ್ಲಿ ಇಂದು ನಾಲ್ಕನೇ ಮಾಸಿಕ ಸಂತೆಯಾಗಿದ್ದು ಈ ಹಿಂದೆ ಬಾಳ್ಳುಪೇಟೆ, ಶುಕ್ರವಾರ ಸಂತೆ ಹಾಗೂ ವಣಗೂರು ಯಶಸ್ವಿಯಾಗಿ ನಡೆದಿದ್ದು ಎಂದು ಮಾಹಿತಿ ನೀಡಿದರು. ಮಹಿಳೆಯರು ಆಹಾರ ಪದಾರ್ಥಗಳ ತಯಾರಿಕೆ ಜೊತೆಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ರಿಪೇರಿ, ಎಂಬ್ರಾಯ್ಡರಿ, ಫ್ಯಾಶನ್ ಡಿಸೈನಿಂಗ್ ಸೇರಿದಂತೆ ಆರ್ಥಿಕ ಅಭಿವೃದ್ಧಿಗೆ ವಿವಿಧ ಕ್ಷೇತ್ರಗಳಲ್ಲಿ ನರೇಗಾ ಯೋಜನೆಯಲ್ಲಿ 100 ದಿನ ಪೂರೈಸಿದ ಕುಟುಬಗಳಿಗೆ ಸರ್ಕಾರದ ಉನ್ನತಿ ಯೋಜನೆಯಡಿಯಲ್ಲಿ ತರಭೇತಿ ನೀಡಲಾಗುತ್ತಿದೆ . ತರಭೇತಿ ಸಮಯದಲ್ಲಿ ಊಟ, ವಸತಿ ಉಚಿತವಾಗಿರುತ್ತದೆ ಮಹಿಳೆಯರು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ನರೇಗಾ ಯೋಜನೆಯಲ್ಲಿ ಕೊಟ್ಟಿಗೆ, ನರ್ಸರಿ, ಅಣಬೆ ಬೇಸಾಯದ ಶೆಡ್ ನಿರ್ಮಾಣಕ್ಕೇ ಒಂದು ಲಕ್ಷಕ್ಕಿಂತ ಹೆಚ್ಚು ಅನುದಾನ ದೊರೆಯುತ್ತಿದೆ ಇದರ ಅನುಕೂಲಗಳನ್ನು ಪಡೆದುಕೊಂಡು ಆರ್ಥಿಕ ಅಭಿವೃದ್ಧಿಯಾಗುವಂತೆ ಕರೆ ನೀಡಿದರು. ಮಹಿಳೆಯರು ತಯಾರಿಸುವ ಪದಾರ್ಥಗಳನ್ನು ಆಹಾರ ಇಲಾಖೆಯ ಗುಣಮಟ್ಟದ ಟ್ರೇಡ್ ಮಾರ್ಕ್ ಅನ್ನು ಪಡೆದು ಪದಾರ್ಥಗಳನ್ನು ಬ್ರಾಂಡ್ ಮಾಡುವ ಮೂಲಕ ಆರ್ಥಿಕ ಅಭಿವೃದ್ಧಿಗೊಳ್ಳುವಂತೆ ಸಲಹೆ ನೀಡಿದರು.
ಗ್ರಾಮ ಪಂಚಾಯತಿ ಆದ್ಯಕ್ಷ ಭರತ್ ಮಾತನಾಡಿ,ಮಹಿಳೆಯರ ಅರ್ಥಿಕ ಅಭಿವೃದ್ದಿ ನಿಟ್ಟಿನಲ್ಲಿ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಸ್ಥಳೀಯವಾಗಿ ಮಾರುಕಟ್ಟೆ ಕಲ್ಪಸಿಕೊಡಲು ಗ್ರಾಮ ಪಂಚಾಯತಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಹರೀಶ್ ಎನ್ ಆರ್ ಎಲ್ ಎಂ ಕಾರ್ಯಕ್ರಮ ವ್ಯವಸ್ಥಾಪಕರಾದ ನಾಗೇಶ್, ದೇವಾಲದಕೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಚಂದ್ರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಮಲಮ್ಮ, ಸಂಜೀವಿನಿ ಯೋಜನೆಯ ತಾಲೂಕು ಮೇಲ್ವಿಚಾರಕರಾದ ರೇಣುಕ ಪ್ರಸಾದ್ ,ರತನ್ ಸೇರಿದಂತೆ ಒಕ್ಕೂಟದ ಸದಸ್ಯರು,ಎಂಬಿಕೆ,ಕೃಷಿ ಸಖಿ,ಪಶು ಸಖಿ ಸ್ವ ಸಹಾಯ ಸಂಘಗಳ ಸದಸ್ಯರು ಇದ್ದರು.