ಹೊಂಗಡಹಳ್ಳ ಗ್ರಾಮ ಪಂಚಾಯಿತಿಯ ಮೂಲಭೂತ ಸೌಕರ್ಯಕ್ಕೆ ಅಡ್ಡಿಯಾಗಿರುವ ಅರಣ್ಯ ಇಲಾಖೆ .
>ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲು ಅರಣ್ಯ ಇಲಾಖೆಯಿಂದ ಅಡ್ಡಗಾಲು
>ಅಭಿವೃದ್ಧಿ ಕಾರ್ಯ ಮಾಡದೆ ಅಧಿಕಾರದಲ್ಲಿದ್ದು ಏನು ಪ್ರಯೋಜನ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಿನಾಮೆ ಮಾತು .
>ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಅನ್ನೋ ಹಾಗೆ ಅರಣ್ಯ ಇಲಾಖೆಯ ನಡವಳಿಕೆ ವಿರುದ್ಧ ಸಿಮೆಂಟ್ ಮಂಜುನಾಥ್ ಆಕ್ರೋಶ.
>ಸಕಲೇಶಪುರದಲ್ಲಿ ದಪ್ಪ ಚರ್ಮದ ಅಧಿಕಾರಿಗಳಿದ್ದಾರೆ ನಮಗೆ ಗೊತ್ತು ದಪ್ಪ ಚರ್ಮ ಹೇಗೆ ಇಳಿಸಬೇಕೆಂದು – ಮಂಜುನಾಥ್ ಸಂಘಿ ಅಕ್ರೋಶ
ಸಕಲೇಶಪುರ : ಯಾವುದೇ ಗ್ರಾಮದ ಅಭಿವೃದ್ಧಿಯಾಗಬೇಕೆಂದರೆ ಅದಕ್ಕೆ ಸರ್ಕಾರದ ಎಲ್ಲಾ ಇಲಾಖೆಗಳ ಸಹಭಾಗಿತ್ವ ಬಹುಮುಖ್ಯ.ಹಾಗೆ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವುದು ಕೂಡ ಇಲಾಖೆಗಳ ಕರ್ತವ್ಯ ಕೂಡ ಹೌದು.
ಆದರೆ ತಾಲ್ಲೂಕಿನ ಗಡಿಯಂಚಿನ ಗ್ರಾಮವಾದ ಹೊಂಗಡಹಳ್ಳ ಗ್ರಾಮ ಪಂಚಾಯಿತಿಯ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಗಾಲಾಗಿರುವುದು ತಿಳಿದುಬಂದಿದೆ .ಗ್ರಾಮದ ಕುಡಿಯುವ ನೀರಿನ ಟ್ಯಾಂಕ್, ಒಳಚರಂಡಿ ,ರಸ್ತೆ,ಬಿ.ಎಸ್.ಎನ್.ಎಲ್ ಟವರ್ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆ ತನ್ನ ಭೂಮಿಯೆಂದು ಅಡ್ಡಗಾಲು ಹಾಕಿರುವುದರಿಂದ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಅಭಿವೃದ್ಧಿ ಕೆಲಸ ಮಾಡಲಾಗದೇ ಪರಿತಪಿಸುತ್ತಿದ್ದಾರೆ .ಜನರಿಂದ ಚುನಾಯಿತರಾಗಿ ಬಂದಮೇಲೆ ಅಭಿವೃದ್ಧಿ ಕೆಲಸ ಮಾಡದೆ ಹೋದರೆ ನಮಗೆ ಅಧಿಕಾರ ಯಾಕೆ…?ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಯತೀಶ್ ಆಕ್ರೋಷ ವ್ಯಕ್ತಪಡಿಸಿದ್ದು .ಗ್ರಾಮ ಪಂಚಾಯತಿಯಲ್ಲಿ ನನಗೆ ಮಾಡುವುದಕ್ಕೆ ಕೆಲಸವೇ ಇಲ್ಲವೆಂದ ಮೇಲೆ ಅಧಿಕಾರದಲ್ಲಿ ಕೂರಲು ನನಗೆ ಆತ್ಮಸಾಕ್ಷಿ ಒಪ್ಪುತ್ತಿಲ್ಲ.
ಆದ್ದರಿಂದ ನನ್ನ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.ಈ ನಿರ್ದಾರಕ್ಕೆ ನಮ್ಮ ಗ್ರಾಪಂ ಸದಸ್ಯರು ಸಹ ಬೆಂಬಲ ನೀಡಿದ್ದಾರೆ.ಅಭಿವೃದ್ದಿ ಕಾರ್ಯಕ್ಕೆ ಅರಣ್ಯ ಇಲಾಖೆಯ ಅಡ್ಡಗಾಲಿನಿಂದ ಗ್ರಾಮ ಪಂಚಾಯತಿ ಅಧ್ಯಕ್ಷರು,ಸದಸ್ಯರು ರಾಜೀನಾಮೆ ನೀಡುವ ಪ್ರಸಂಗ ಬಂದಿರುವುದು ರಾಜ್ಯದಲ್ಲೇ ಇದು ಮೊದಲು ಎಂದು ಬೇಸರದ ನುಡಿಗಳನ್ನಾಡಿದರು.
ಈ ವೇಳೆ ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್ ಮಾತನಾಡಿ , ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಯೋಜನೆಯ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಪ್ರತಿ ಗ್ರಾಮಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದೆಂದು ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಆದರೆ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಈ ಯೋಜನೆಯ ಅನುಷ್ಠಾನಕ್ಕೆ ದುಃಸ್ವಪ್ನವಾಗಿ ಕಾಡುತ್ತಿದ್ದಾರೆ.ಹೊಂಗಡಹಳ್ಳ ಗ್ರಾಮವು ತಾಲ್ಲೂಕಿನ ಗಡಿಯಂಚಿನ ಗ್ರಾಮವಾಗಿದ್ದು ಇಲ್ಲಿನ ಜನರು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ.
ಗ್ರಾಮಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ, ಚರಂಡಿ,ರಸ್ತೆಗಳ ಕಾಮಗಾರಿಗೆ ಅರಣ್ಯ ಇಲಾಖೆ ತಡೆಯೊಡ್ಡುತ್ತಿದೆ ಎಂದು ಅರಣ್ಯ ಇಲಾಖೆ ವಿರುದ್ಧ ಹರಿಹಾಯ್ದರು.ಮೂಲಭೂತ ಸೌಕರ್ಯಗಳಿಗೆ ಅಡ್ಡಗಾಲು ಆಗಬಾರದೆಂದು ರಾಜ್ಯ ಸರ್ಕಾರವೇ ನಿರ್ದೇಶನ ನೀಡಿದ್ದರೂ ಕೂಡ ಸ್ಥಳೀಯ ಅರಣ್ಯ ಇಲಾಖೆ ಮಾತ್ರ ಸರ್ಕಾರದ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಆದ್ದರಿಂದ ಇನ್ನು ಒಂದು ವಾರದೊಳಗೆ ಅಭಿವೃದ್ಧಿ ಕಾಮಗಾರಿಗಳಿಗೆ ಅವಕಾಶ ನೀಡದಿದ್ದರೆ ಅರಣ್ಯ ಇಲಾಖೆ ವಿರುದ್ಧ ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಸ್ಥರ ಹಾಗೂ ಜನಪ್ರತಿನಿಧಿಗಳ ಜೊತೆಗೆ ಬೃಹತ್ ಪ್ರತಿಭಟನೆಯ ಜೊತೆಗೆ ನಾವು ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸುತ್ತೇವೆ ನಮ್ಮನ್ನು ಯಾರು ಬಂದು ತಡೆಯುತ್ತಾರೆ ಎಂದು ಸವಾಲು ಹಾಕಿದ್ದಾರೆ .ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಈ ಈ ಗ್ರಾಮಸ್ಥರೊಂದಿಗೆ ಸಂಘರ್ಷ ನಡೆಸದೆ ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸುವಂತೆ ಸಲಹೆ ನೀಡಿದ್ದಾರೆ.
ತಾಲ್ಲೂಕಿನಲ್ಲಿರುವ ಅಧಿಕಾರಿಗಳು ದಪ್ಪ ಚರ್ಮದವರು: ಮಂಜುನಾಥ್ ಸಂಘಿ
ರಾಜ್ಯದಲ್ಲಿ ಐದಾರು ಮಲೆನಾಡು ಜಿಲ್ಲೆ ಗಳಿದ್ದು ಅದರಲ್ಲಿ ಹೆಚ್ಚಿನದಾಗಿ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿಗೆ ಮಾತ್ರ ಅರಣ್ಯ ಇಲಾಖೆ ಕಡೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ತಾಲ್ಲೂಕು ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಮುಂದಿನ ಆರೋಪಿಸಿದ್ದಾರೆ .ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನಗೊಳಿಸಲು ಜಾಗದ ಸಮಸ್ಯೆ ಇದ್ದರೆ ಅದನ್ನು ಪರಿಹರಿಸಿ ಜನಗರಿಗೆ ಮೂಲಸೌಕರ್ಯ ಕಲ್ಪಿಸಬೇಕೆಂದು ಉಸ್ತುವಾರಿ ಮಂತ್ರಿಗಳ ಆದೇಶ ನೀಡಿದ್ದರೂ ಇಲ್ಲಿನ ಅಧಿಕಾರಿಗಳು ಮಾತ್ರ ಮಂತ್ರಿಗಳ ಮಾತಿಗೆ ಬೆಲೆ ನೀಡುತ್ತಿಲ್ಲ .ಹೊಂಗಡಹಳ್ಳ ಸೇರಿದಂತೆ ಹಾನುಬಾಳು, ದೇವಲದಕೆರೆ ಹೆತ್ತೂರು ಭಾಗಗಳಲ್ಲಿ ಅರಣ್ಯ ಇಲಾಖೆಯವರ ಕಿರುಕುಳ ಮಿತಿಮೀರಿದ್ದು ಇದನ್ನು ಸರ್ಕಾರದ ಗಮನಕ್ಕೆ ತಂದು ಅಭಿವೃದ್ಧಿ ಕೆಲಸಕ್ಕೆ ತಾತ್ಸಾರ ತೋರುತ್ತಿರುವ ಅಧಿಕಾರಿಗಳ ದಪ್ಪ ಚರ್ಮವನ್ನು ಇಳಿಸಲಾಗುವುದು ಎಂದು ಎಚ್ಚರಿಸಿದರು