ಹಾಸನ : ಕಾಡಾನೆಗಳ ವಾಸ ಸ್ಥಳವಾದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಮರಳು , ಕಲ್ಲು ಗಣಿಗಾರಿಕೆ ನಿಲ್ಲಿಸುವುದು ಸೂಕ್ತ ಎಂದು ಕಾಡಾನೆ ಸಂರಕ್ಷಣಾ ಸಂಘದ ಅಧ್ಯಕ್ಷ ವಿಕ್ರಂ ಗೌಡ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆನೆಗಳ ಮೀಸಲು ಅರಣ್ಯ ಪ್ರದೇಶ ವಿರುವ ಆಲೂರು, ಬೇಲೂರು, ಸಕಲೇಶಪುರ ಭಾಗದಲ್ಲಿ ಅಕ್ರಮ ಗಣಿಗಾರಿಕೆ ಯಿಂದ ಆಗುತ್ತಿರುವ ಭಾರಿ ಸಿಡಿಮದ್ದು ಸ್ಪೋಟದ ಶಬ್ದ ಆನೆಗಳನ್ನು ವಿಚಲಿತಗೊಲಿಸುತ್ತಿದ್ದು ಇದರಿಂದಲೇ ಆನೆಗಳು ಕಾಡನ್ನು ಬಿಟ್ಟು ನಾಡಿಗೆ ಬರಲಾರಂಭಿಸಿವೆ ಎಂದು ಹೇಳಿದರು.
ಕಾಡಾನೆಗಳು ನೀರು ಕುಡಿಯಲು ಬರುವ ನದಿ ದಂಡೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಯಿಂದ ಆನೆಗಳಿಗೆ ಸಂಕಷ್ಟ ಎದುರಾಗಿದೆ.ಅದರಲ್ಲು ರಾತ್ರಿ ವೇಳೆ ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆಯಿಂದ ಆನೆಗಳಿಗೆ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ, ಬಹುತೇಕ ಹಾಲಿ , ಮಾಜಿ ಶಾಸಕರು ಮತ್ತು ಜನ ಪ್ರತಿನಿಧಿಗಳು ಗಣಿಗಾರಿಕೆಯಲ್ಲಿ ಶಾಮೀಲಾಗಿದ್ದು ಈ ಕಾರಣದಿಂದಲೇ ಗಣಿಗಾರಿಕೆ ನಿಲ್ಲಿಸಲು ಮುಂದಾಗುತ್ತಿಲ್ಲ ಎಂದು ದೂರಿದರು.
ರೈಲುಗಳಿಗೆ ಸಿಲುಕಿ ಕಾಡಾನೆಗಳು ಅಪಘಾತಕ್ಕೀಡಾಗುತ್ತಿವೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಪ್ರಮುಖ ಕಾರಣ, ರೈಲು ಹಳಿಗಳು ಹಾದು ಹೋಗುವ ಅರಣ್ಯ ಪ್ರದೇಶಗಳಲ್ಲಿ ಬೇಲಿ ನಿರ್ಮಾಣ ಮಾಡಬೇಕಿರುವ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಇದರಿಂದ ಕಾಳಿಂಗ ಸರ್ಪ, ಜಿಂಕೆ, ಹಂದಿ, ಕಾಡುಕೋಣ ಸೇರಿದಂತೆ ಅನೇಕ ಕಾಡು ಪ್ರಾಣಿಗಳಿಗೆ ಸಾವಿಗೂ ಕಾರಣವಾಗಿದೆ ಎಂದರು.
ಈಗಾಗಲೇ ಇಲಾಖೆ ಕೆಲವೆಡೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಿದ್ದು ಮತ್ತು ಇದನ್ನು ವಿಸ್ತರಿಸಲು ಮುಂದಾಗಿದ್ದು ಒಳ್ಳೆಯ ಬೆಳೆವಣಿಗೆ ಅಲ್ಲ, ಇದರಿಂದ ಆನೆಗಳಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ ಸರಕಾರ ಈ ನಿರ್ಧಾರವನ್ನು ಬದಲಾಯಿಸಿಕೊಳ್ಳಬೇಕು ಬ್ಯಾರಿಕೆಡ್ ತೆರವು ಮಾಡುವುದು ಸೂಕ್ತ ಎಂದರು.
ಜನರ ಸ್ವಯಂ ರಕ್ಷಣೆ ದೃಷ್ಟಿಯಿಂದ ಸರ್ಕಾರ ಗನ್ ಲೈಸೆನ್ಸ್ ನೀಡಿರುವುದು ಶ್ಲಾಘನೀಯ ಆದರೆ ಕಾಡು ಪ್ರಾಣಿಗಳಿಗೆ ಮತ್ತು ಕಾಡಾನೆಗಳಿಗೆ ಗುಂಡು ಹಾರಿಸಿರುವ ಹಲವು ಉದಾಹರಣೆ ಇದೆ.ಪ್ರಾಣಿಗಳ ಪ್ರಾಣಕ್ಕೆ ಕುತ್ತು ತರುವಂತಹ ಮದ್ದು, ಗುಂಡುಗಳನ್ನು ಗನ್ ಮಾಲೀಕರಿಗೆ ನೀಡಬಾರದು ಎಂದು ಮನವಿ ಮಾಡಿದರು.
ಹಲವು ವರ್ಷಗಳಿಂದ ಪರಿಸರಕ್ಕೆ ಪೂರಕ ಹಾಗೂ ಆನೆಗಳ ಪರವಾಗಿ ಕೆಲಸ ಮಾಡುತ್ತಿದ್ದೇನೆ, ಜೀವದ ಹಂಗು ತೊರೆದು ಆನೆಗಳ ಸಂರಕ್ಷಣೆಗೆ ಕೆಲಸ ಮಾಡುತ್ತಿರುವ ನಮ್ಮ ಬಗ್ಗೆ ಕೆಲವರು ಮನಬಂದಂತೆ ಮಾತನಾಡುತ್ತಿದ್ದು ಇದನ್ನು ಬಿಡಬೇಕು, ಅಧಿಕಾರಿಗಳು ನಮ್ಮ ಸಹಕಾರ ಬೇಕಾದಾಗ ಪಡೆದುಕೊಂಡು ಮತ್ತೆ ನಮ್ಮನ್ನೇ ದೂರುವ ಕೆಲಸ ಮಾಡುತ್ತಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಕಾಗೋಷ್ಠಿಯಲ್ಲಿ ಸುಧೀರ್ ಹುರುಡಿ, ಶಿವಕುಮಾರ್ ಇದ್ದರು.