ಸಕಲೇಶಪುರ: ತಾಲೂಕಿನ ದೇವಾಲದಕೆರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಮರಗುಂದ ಗ್ರಾಮದಲ್ಲಿರುವ ಹೊಡಚಳ್ಳಿ ಆರೋಗ್ಯ ಉಪಕೇಂದ್ರವನ್ನು ಆರೋಗ್ಯ ಇಲಾಖೆ ವತಿಯಿಂದ ಕಳೆದ ಹಲವು ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದು ಆದರೆ ಈ ಉಪಕೇಂದ್ರದಲ್ಲಿ ಕಾರ್ಯನಿರ್ವಹಿಸಲು ವೈದ್ಯರು ಹಾಗೂ ಸಿಬ್ಬಂದಿ ಬಾರದ ಕಾರಣ ಇದನ್ನೇ ಸದುಪಯೋಗ ಮಾಡಿಕೊಂಡ ಗ್ರಾಮದ ಉದಯ್ ಎಂಬುವರು ಸರ್ಕಾರ ನಿರ್ಮಾಣ ಮಾಡಿದ ಆರೋಗ್ಯ ಉಪಕೇಂದ್ರವನ್ನೆ ತನ್ನ ಮನೆಗಯಾಗಿ ಮಾರ್ಪಡಿಸಿಕೊಂಡಿದ್ದರು.
ಈ ಕುರಿತು ಗ್ರಾಮ ಪಂಚಾಯತಿ ಸದಸ್ಯರಗಳು ಸದರಿ ಕಟ್ಟಡವನ್ನು ತೆರವು ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಉಪಕೇಂದ್ರ ವನ್ನು ತೆರವು ಮಾಡುವಂತೆ ಸ್ಥಳಕ್ಕೆ ಯಾವುದೇ ಅಧಿಕಾರಿ ಬಂದರು ಸಹ ಅವರನ್ನು ಗದರಿಸಿ ಕಳುಹಿಸುತ್ತಿದ್ದರು.ಅಂತಿಮವಾಗಿ ಬುಧವಾರ ಸಂಜೆ ಹರ ತಾಲೂಕು ಆರೋಗ್ಯಾಧಿಕಾರಿ ಮಹೇಶ್, ದೇವಾಲದಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಭರತ್ ,ಗ್ರಾ.ಪಂ ಸದಸ್ಯ ರವೀಂದ್ರ ಹಾಗೂ ಇತರ ಸದಸ್ಯರುಗಳು, ಆರೋಗ್ಯ ಇಲಾಖೆಯ ತಂಡ, ಪೋಲಿಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದಾಗ ಉದಯ್ ದಂಪತಿಗಳು ಕಟ್ಟಡ ನಮ್ಮ ಸ್ವಂತದೆಂದು ಅಧಿಕಾರಿಗಳ ಜೊತೆ ಮಾತಿನ ಚಕಾಮುಖಿ ನಡೆಸಿದ್ದಾರೆ. ಆದರೆ ಯಾವುದೆ ದಾಖಲಾತಿಗಳನ್ನು ನೀಡುವಲ್ಲಿ ಅವರು ವಿಫಲರಾದ ಕಾರಣ ಕಟ್ಟಡಕ್ಕೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.