ಸಕಲೇಶಪುರ : ವಿದ್ಯಾರ್ಥಿನಿಯರ ಜೊತೆ ಕಂಡಕ್ಟರ್ ಅಸಭ್ಯ ವರ್ತನೆ : ಸಿಡಿದೆದ್ದ ಪೋಷಕರು ಬಸ್ ತಡೆದು ಆಕ್ರೋಶ.
ಸಕಲೇಶಪುರ : ಸಕಲೇಶಪುರದಿಂದ ಹಾಸನಕ್ಕೆ ತೆರಳುವ ಕಾಲೇಜು ವಿದ್ಯಾರ್ಥಿನಿಯರ ಜೊತೆ ಬಸ್ ಕಂಡಕ್ಟರ್ ನೊಬ್ಬ ಅಸಭ್ಯವಾಗಿ ವರ್ತಿಸಿರುವುನ್ನು ಖಂಡಿಸಿ ಪೋಷಕರು ಬಸ್ ತಡೆದು ಕಂಡಕ್ಟರ್ ಹಾಗೂ ಡ್ರೈವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ಮುಂಜಾನೆ ಜರುಗಿದೆ.
ತಾಲೂಕಿನ ಬಾಗೆ ಬಾಳ್ಳುಪೇಟೆಯಿಂದ ನೂರಾರು ವಿಧ್ಯಾರ್ಥಿಗಳು ಜಿಲ್ಲಾ ಕೇಂದ್ರದ ಕಾಲೇಜುಗಳಿಗೆ ತೆರಳುತ್ತಾರೆ. ಈ ಸಮಯದಲ್ಲಿ ಸಕಲೇಶಪುರ ಡಿಪೋದಿಂದ ಮೈಸೂರಿಗೆ ತೆರಳುವ ಬಸ್ಸಿನ ಕಂಡಕ್ಟರ್ ವಿದ್ಯಾರ್ಥಿನಿಯರ ಜೊತೆ ಏಕವಚನದಲ್ಲಿ ಮಾತನಾಡುವುದು , ಕೈ ಮುಟ್ಟುವುದು, ಪಾಸ್ ತೋರಿಸಿದರೆ ತೋರಿಸುವದಕ್ಕೆ ನಾನು ಹೇಳಿದ್ದಿನಾ ಎಂದು ಉಲ್ಟಾ ಮಾತನಾಡುವುದು, ಅಣ್ಣ ಅಂತ ಕರೆದರೆ ನನ್ನನ್ನು ಅಣ್ಣ ಎಂದು ಕರೆಯಬೇಡಿ ಹೆಸರಿಡಿದು ಕರೆಯಿರಿ ಎಂದು ವಿದ್ಯಾರ್ಥಿಗಳಿಗೆ ಹೇಳುತ್ತಾನೆ ಹಾಗೂ ವಿದ್ಯಾರ್ಥಿನಿಯರು ಇನ್ನು ಬಸ್ಸಿನೊಳಗೆ ಹತ್ತೇ ಇರುವುದಿಲ್ಲ ಆಗಲೇ ಬಸ್ಸನ್ನು ಮುಂದಕ್ಕೆ ಚಾಲನೆ ಮಾಡುತ್ತಾರೆ ಇದರಿಂದ ಬಿದ್ದು ಕೈಕಾಲಿಗೆ ತರಚಿದ ಗಾಯಗಳಾಗಿವೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಹೀಗೆ ಅತಿರೇಕದ ವರ್ತನೆಯಿಂದ ರೋಸಿ ಹೋದ ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ತಿಳಿಸಿದ್ದರಿಂದ ಇಂದು ಬೆಳಗ್ಗೆ ಪೋಷಕರು ಗುಲಗಳಲೆ ಸಮೀಪ ಬಸ್ಸನ್ನು ತಡೆದು ಕಂಡಕ್ಟರ್ ಹಾಗೂ ಡ್ರೈವರ್ ಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಕಲೇಶಪುರದಿಂದ ಪ್ರತಿದಿನ ಹೊರಡುವ ಬಸ್ಸು ಬಾಗೆ,ಬಾಳ್ಳುಪೇಟೆ,ಪಾಳ್ಯ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೋಗೋದು ಕರ್ತವ್ಯ ಆದರೆ ಈ ಬಸ್ಸಿನ ಚಾಲಕ ಹಾಗೂ ನಿರ್ವಾಹಕ ನಿಗದಿತ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸದೆ ಹೋಗುವುದರಿಂದ ಸೂಕ್ತ ಸಮಯಕ್ಕೆ ಕಾಲೇಜಿಗೆ ತಲುಪಲಾಗದೇ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ.
ಈ ರೀತಿ ವಿದ್ಯಾರ್ಥಿಗಳ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ಸಕಲೇಶಪುರ ಘಟಕದ ಚಾಲಕ ಹಾಗೂ ನಿರ್ವಾಹನ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಇವರಿಬ್ಬರನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆ ಆಗ್ರಹಿಸಿದ್ದಾರೆ.