ಸಕಲೇಶಪುರ: ಪಶ್ಚಿಮ ಘಟ್ಟಗಳ ಸಂರಕ್ಷಣಾ ಜಾಗದಲ್ಲಿ ಯಾರಾದರು ಅಕ್ರಮವಾಗಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಮುಂದಾದಲ್ಲಿ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಂದು ಪಶ್ಚಿಮ ಘಟ್ಟ ಸಂರಕ್ಷಣಾ ಸಮಿತಿ ಅಧ್ಯಕ್ಷ ಗೋವಿಂದ ನಾಯಕ ಭಟ್ಕಳ ಹೇಳಿದರು.
ತಾಲೂಕಿನ ಹಾನುಬಾಳ್ ಗ್ರಾ.ಪಂ ವ್ಯಾಪ್ತಿಯ ಮೂರುಕಣ್ಣು ಗುಡ್ಡ ರಕ್ಷಿತಾರಣ್ಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿ ತಾಲೂಕಿನ ಮೂರುಕಣ್ಣು ಗುಡ್ಡ ರಕ್ಷಿತಾರಣ್ಯದಲ್ಲಿ ರೆಸಾರ್ಟ್ ಮಾಲಿಕರೋರ್ವರು ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ಯಾವುದೆ ಅನುಮತಿ ಪಡೆಯದೆ ಗುಡ್ಡವನ್ನು ಬಗೆದು ಜೆಸಿಬಿ ಮುಖಾಂತರ ರಸ್ತೆ ಮಾಡಿದ ಹಿನ್ನಲೆಯಲ್ಲಿ ಸಕಲೇಶಪುರ ಅರಣ್ಯ ಇಲಾಖೆ ವತಿಯಿಂದ ದೂರು ದಾಖಲಿಸಿ ಜೆಸಿಬಿಯನ್ನು ವಶಡಿಸಿಕೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ನಾನು ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷನಾಗಿ ಇಲ್ಲಿಗೆ ಆಗಮಿಸಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದ್ದೇನೆ. ಮೇಲ್ನೋಟಕ್ಕೆ ರೆಸಾರ್ಟ್‌ನವರು ಇಲ್ಲಿ ಅಕ್ರಮವಾಗಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿರುವುದು ಸಾಬೀತಾಗಿದೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗತ್ತದೆ. ರಕ್ಷಿತಾರಣ್ಯಗಳಲ್ಲಿ ಅತಿಕ್ರಮಣ ಪ್ರವೇಶದಿಂದ ವನ್ಯ ಜೀವಿಗಳ ಅಸ್ತಿತ್ವಕ್ಕೆ ಸಂಚಕಾರ ಬರುವ ಸಾಧ್ಯತೆ ಇದೆ. ಇದಲ್ಲದೆ ಕೆಲವು ರೆಸಾರ್ಟ್ ಹಾಗೂ ಹೋಂಸ್ಟೇಗಳ ಮಾಲಿಕರು ಪ್ರವಾಸಿಗರನ್ನು ಅನಾಧಿಕೃತವಾಗಿ ರಕ್ಷಿತಾರಣ್ಯಗಳಿಗೆ ಟ್ರಕ್ಕಿಂಗ್‌ಗೆ ಕರೆದುಕೊಂಡು ಹೋಗುತ್ತಿರುವುದು ಸಹ ತಿಳಿದು ಬಂದಿದೆ. ಇದು ಸಹ ರಕ್ಷಿತಾರಣ್ಯ ಸಂರಕ್ಷಣಾ ಕಾಯಿದೆಗೆ ವಿರುದ್ದವಾಗಿದೆ. ಈ ಸಂಬಂ‘ ಹಲವಾರು ಪ್ರಕರಣಗಳು ಈಗಾಗಲೆ ದಾಖಲಾಗಿದೆ. ರಸ್ತೆ ಅಭಿವೃದ್ದಿ ಕಾಮಗಾರಿ ಹಿನ್ನೆಲೆಯಲ್ಲಿ ವಶಪಡಿಸಿಕೊಂಡ ಜೆಸಿಬಿ ಯಂತ್ರವನ್ನು ಸಹ ಹಿಂತಿರುಗಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಸೂಕ್ಷ್ಮವಾಗಿ ಪರಿಶೀಲಿಸಿ ಆರೋಪಿಗಳು ಕಾನೂನಿಡಿಯಿಂದ ತಪ್ಪಿಸಿಕೊಳ್ಳದಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಜೊತೆ ಚರ್ಚೆ ನಡೆಸಿ ಕಠಿಣ ಕಾಯಿದೆಗಳನ್ನು ಹಾಕಲು ಚಿಂತನೆ ನಡೆಸಲಾಗಿದೆ. ಇದೇ ಸಂಧರ್ಭದಲ್ಲಿ ಸೆಕ್ಷನ್ 4 ಕುರಿತು ಮಾತನಾಡಿ ಸೆಕ್ಷನ್ 4 ಒಳಪಡುವ ಹಾನುಬಾಳ್ ಹೋಬಳಿಯ 7 ಗ್ರಾಮಗಳ ಸುಮಾರು 8000ಸಾವಿರ ಎಕರೆ 1920ನೇ ಇಸವಿಯಲ್ಲಿ ಗ್ರಾಮಸ್ಥರಿಗೆ ನೀಡಲಾಗಿತ್ತು. ಆದರೆ ಬಹುತೇಕ ಜಾಗ ಅಭಿವೃದ್ದಿಯಾಗದೆ ಹಾಗೂ ಕಾನೂನು ಮೂಲಕ ಹಸ್ತಾಂತರ ಮಾಡದ ಕಾರಣ ಪುನ: ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಲಿದೆ. ಈ ಕುರಿತು ಸರ್ಕಾರದ ಜೊತೆ ಚರ್ಚೆ ನಡೆಸುತ್ತೇನೆಂದು ತಿಳಿಸಿದರು.
ಪಶ್ಚಿಮ ಘಟ್ಟದ ಅತಿಸೂಕ್ಷ್ಮ ಶೋಲಾರಣ್ಯದ ಒಳಪಪದರಗಳು ವರ್ಷವಿಡಿ ನದಿಗಳಿಗೆ ಹರಿಸುವಷ್ಟು ನೀರನ್ನು ಸಂಗ್ರಹಿಸಿಟ್ಟಿರುತ್ತವೆ. ಘಟ್ಟದಲ್ಲಿ ತಲೆಎತ್ತಿರುವ ಮಾಫಿಯಾಗಳು ಶೋಲಾರಣ್ಯದ ಮೇಲ್ಪದರಕ್ಕೆ ಬಾರಿ ಪ್ರಮಾಣದಲ್ಲಿ ಹಾನಿ ಮಾಡುತ್ತಲೇ ಇವೆ. ಇದರಿಂದ ಮಣ್ಣಿನ ಒಳಪದರದ ನೀರಿನ ಧಾರಣಾ ಸಾಮರ್ಥ್ಯ ದಿಢೀರ್ ತಗ್ಗಿ ಜಲಸ್ಪೋಟ ಸಂಭವಿಸುತ್ತದೆ. ಕಳೆದ ಬಾರಿ ಮತ್ತು ಈ ವರ್ಷ ಪಶ್ಚಿಮ ಘಟ್ಟದಲ್ಲಿ ಭೂಕುಸಿತವಾಗಿದ್ದಕ್ಕೆ ಮಾನವ ಹಸ್ತಕ್ಷೇಪವೇ ಕಾರಣವಾಗಿದ್ದು ಈ ನಿಟ್ಟಿನಲ್ಲಿ ಪಶ್ಚಿಮ ಘಟ್ಟಗಳಲ್ಲಿ ಮಾನವನ ಹಸ್ತಕ್ಷೇಪ ತಡೆದು ಪಶ್ಚಿಮ ಘಟ್ಟವನ್ನು ಅದರ ಪಾಡಿಗೆ ಬಿಡಲು ಸರ್ಕಾರ ಕಠಿಣ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ವಲಯ ಅರಣ್ಯಾಧಿಕಾರಿ ಶಿಲ್ಪಾ, ಮತ್ತು ಕಂದಾಯ, ಪ್ರವಾಸೋದ್ಯಮ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.