ಹೆತ್ತೂರು ಭಾಗದ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಆರೋಗ್ಯ ಇಲಾಖೆ.
ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೃಷ್ಣಪ್ಪ ಆಕ್ರೋಶ.
ಪ್ರತಿ ಆಸ್ಪತ್ರೆಯ ಪ್ರಮುಖ ಭಾಗವೆಂದರೆ ಆಂಬ್ಯುಲೆನ್ಸ್, ಅದು ಇಲ್ಲದಿದ್ದರೆ ಅಗತ್ಯ ಸೇವೆಗಳು ದುರ್ಬಲಗೊಳ್ಳುತ್ತದೆ.
ತಾಲೂಕಿನ ಹೆತ್ತೂರು ಹೋಬಳಿ ಕೇಂದ್ರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಇಲ್ಲದೆ ಹೋಬಳಿ ಕೇಂದ್ರದಿಂದ ತಾಲೂಕು ಹಾಗು ಜಿಲ್ಲಾ ಕೇಂದ್ರಗಳಿಗೆ ರೋಗಿಗಳು ತೆರಳಲು ಪರಿತಪಿಸುತ್ತಿರುವ ಪರಿಸ್ಥಿತಿ ಎದುರಾಗಿದೆ.
ತಾಲೂಕು ಕೇಂದ್ರದಿಂದ 30 ಕಿಮೀ ದೂರದಲ್ಲಿರುವ ಹೆತ್ತೂರಿನ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಸಮಯದಲ್ಲಿ ಚಿಕಿತ್ಸೆ ದೊರಕದೆ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗೆ ತಲುಪಲಾಗದೆ ಪ್ರಾಣ ಕಳೆದುಕೊಂಡಿರುವ ಘಟನೆಗಳು ಬಳಷ್ಟಿವೆ.
ನೆನ್ನೆ ಕೂಡ ಯಸಳೂರು ಹೋಬಳಿಯ ದೊಡ್ಡ ಕಲ್ಲೂರು ಗ್ರಾಮದ ಮೂರು ವರ್ಷದ ರೋಷನ್ ಎಂಬ ಮಗು ಹಾವು ಕಡಿತದಿಂದ ಸೂಕ್ತವಾದ ಪ್ರಥಮ ಚಿಕಿತ್ಸೆ ದೊರಕದೆ ಹಾಗೂ ಹಾವು ಕಡಿತಕ್ಕೆ ದೊರಕಬೇಕಾದ ಚಿಕಿತ್ಸೆ ದೊರೆಯದ ಕಾರಣ ಮೃತಪಟ್ಟಿರುವ ಘಟನೆ ಜರುಗಿದೆ. ಒಂದು ವೇಳೆ ಸಮರ್ಪಕವಾಗಿ ತುರ್ತು ಚಿಕಿತ್ಸೆ ವಾಹನ ಸಿಕ್ಕಿದ್ದರೆ ಆ ಅಮೂಲ್ಯ ಸಮಯದಲ್ಲಿ ತಾಲೂಕು ಹಾಗು ಜಿಲ್ಲಾ ಕೇಂದ್ರದ ಆಸ್ಪತ್ರೆಗಳಿಗೆ ತಲುಪಿದ್ದರೆ ಮಗು ಮಗುವಿನ ಪ್ರಾಣ ಉಳಿಸಬಹುದಾಗಿತ್ತು ಎಂಬುದು ಪೋಷಕರ ಮಾತಾಗಿದೆ.
ಇನ್ನೂ ಹೆತ್ತೂರು ಹೋಬಳಿಯಲ್ಲಿ ಸುತ್ತಮುತ್ತಲ ಹತ್ತಾರು ಗ್ರಾಮಗಳು ತಾಲೂಕು ಕೇಂದ್ರದಿಂದ 50 ರಿಂದ 60 ಕಿ. ಮೀ ದೂರದಲ್ಲಿದೆ. ಇಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ತೆರಳಬೇಕಾಗಿದೆ ಯಾವುದೇ ಆಂಬುಲೆನ್ಸ್ ಸೇವೆ ಇಲ್ಲದಿರುವುದು ಈ ಭಾಗದ ಜನರಿಗೆ ಶಾಪವಾಗಿ ಪರಿಣಮಿಸಿದೆ.
ಹಿಂದೆ ಈ ಭಾಗದ ಜನರ ಹೋರಾಟದ ಫಲವಾಗಿ 108 ಅಂಬುಲೆನ್ಸ್ ಸೇವೆ ಒದಗಿಸಿದ್ದರು ಆದರೆ 108 ಅಂಬುಲೆನ್ಸ್ ಗೆ ಯಾವುದೇ ಸಿಬ್ಬಂದಿಗಳಾಗಲಿ , ಸುಸಜ್ಜಿತವಾದ ವಾಹನವಾಗಲಿ ನೀಡದೆ ಇದ್ದಿದ್ದರಿಂದ ಕಳೆದ ಆರು ತಿಂಗಳಿಂದ ಆಂಬುಲೆನ್ಸ್ ಸೇವೆ ಇಲ್ಲದೆ ಜನರು ತಮ್ಮ ಖಾಸಗಿ ವಾಹನದಲ್ಲೇ ಆಸ್ಪತ್ರೆಗೆ ತಲುಪಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬಗ್ಗೆ ಶಾಸಕ ಎಚ್ ಕೆ ಕುಮಾರಸ್ವಾಮಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರು ಯಾರು ಕೂಡ ಇತ್ತ ಗಮನ ಹರಿಸದೆ ಇರುವುದು ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಈ ಬಗ್ಗೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ತತ್ತಕ್ಷಣದಿಂದ ಹೆತ್ತೂರು ಹೋಬಳಿ ಕೇಂದ್ರಕ್ಕೆ ಆಂಬುಲೆನ್ಸ್ ಸೇವೆ ಒದಗಿಸದಿದ್ದರೆ ಹೆತ್ತೂರು ಹೋಬಳಿ ಕೇಂದ್ರವನ್ನು ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.ಆಂಬುಲೆನ್ಸ್ ಸೇವೆ ಅಸಮರ್ಪಕತೆಯಿಂದ ಜನರ ಜೀವದ ಜತೆ ಆರೋಗ್ಯ ಇಲಾಖೆ ಆಟ ಆಡುತ್ತಾ ಇದೆ. ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.