ಬೇಲೂರು: ತಾಲ್ಲೂಕಿನ ಸಂಕೇನಹಳ್ಳಿ ಸಮೀಪದ ಶಿವ ನಂಜುಂಡೇಶ್ವರ ಶಾಲೆಯ ಮುಖ್ಯ ಶಿಕ್ಷಕ ನರೇಂದ್ರ ಎಂಬಾಂತ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದ ಹೆಣ್ಣು ಮಕ್ಕಳ ಸಂಬಂಧಿಕರು ಆತನಿಗೆ ಥಳಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಆಗಮಿಸಿ ತಮ್ಮ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ .
ಸಂಕೇನಹಳ್ಳಿ ಸಮೀಪದ ತರಳಬಾಳು ವಿದ್ಯಾಸಂಸ್ಥೆಯ ಶಿವನಂಜುಂಡೇಶ್ವರ ಶಾಲಾ ಮುಖ್ಯ ಶಿಕ್ಷಕನಾಗಿರುವ ನರೇಂದ್ರ 10 ನೇ ತರಗತಿಯ ವಿದ್ಯಾರ್ಥಿನಿಯೋರ್ವಳನ್ನು ಪದೇ ಪದೇ ಆಫೀಸ್ ರೂಂ ಕಸ ಗುಡಿಸಲು ಕರೆದು ಲೈಂಗಿಕ ಕಿರುಕುಳ ನೀಡುತ್ತಿರುವು ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ ಈ ಮುಖ್ಯ ಶಿಕ್ಷಕ ಇತ್ತೀಚೆಗೆ ಅರ್ಧ ವಾಷಿಕ ಪರೀಕ್ಷೆ ಮುಗಿದ ಬಳಿಕ ಅಫೀಸಿಗೆ ಕರೆದು ವಿದ್ಯಾರ್ಥಿನಿಯ ಕೈ ಹಿಡಿದು ಮುತ್ತು ನೀಢಲು ಮುಂದಾಗಿದ್ದಾನೆ. ಆಕೆ ಕೈ ಬಿಡಿಸಿ ಕೊಂಡು ಅಳುತ್ತಾ ಮನೆಗೆ ಬಂದಿದ್ದಾಳೆ. ಇಷ್ಟಾದರೂ ವಿದ್ಯಾರ್ಥಿನಿ ಆ ಕೃತ್ಯವನ್ನು ಹೇಳಲು ಮುಜುಗರಪಟ್ಟು ಹೆದರಿಕೆಯಿಂದ ತಿಳಿಸಿರಲಿಲ್ಲ. ಕೆಲ ಸಹಪಾಠಿಗಳಿಗೆ ವಿಷಯ ಗೊತ್ತಾದ ನಂತರ ತನ್ನ ತಾಯಿ ಹಾಗು ದೊಡ್ಡಪ್ಪನ ಮಗನಿಗೆ ವಿಷಯ ತಿಳಿಸಿದ್ದಾಳೆ. ಗುರುವಾರ ಶಿಕ್ಷಕನ್ನು ವಿಚಾರಿಸಲಾಗಿ ಆತನು ಪೋಲೀಸ್ ಠಾಣೆಗೆ ಬರಲು ಒಪ್ಪದಿದ್ದಾಗ ಸಂಬಂಧಿಕರು ಆತನಿಗೆ ಧರ್ಮದೇಟು ನೀಡಿದ್ದಾರೆ. ಬಳಿಕ ಪೊಲೀಸರು ಆರೋಪಿಗೆ ರಕ್ಷಣೆ ನೀಡಿ ಠಾಣೆಗೆ ಕರೆದು ತಂದಿದ್ದಾರೆ. ಪೋಷಕರು ದೂರು ನೀಡಲು ಹಿಂಜರಿದಾಗ ಸ್ವತಃ ಪೊಲೀಸರು ಗ್ರಾಮಕ್ಕೆ ತೆರಳಿ ವಿದ್ಯಾರ್ಥಿನಿಯ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಕರಣವನ್ನು ಮುಚ್ಚಿ ಹಾಕುವ ಬಗ್ಗೆ ಕೆಲವು ತಂತ್ರಗಾರಿಕೆ ನಡೆದವು ಎನ್ನಲಾಗಿದೆ . ಆದರೆ ಕೊನೆಯಲ್ಲಿ ವಿದ್ಯಾರ್ಥಿನಿ ಹೇಳಿಕೆ ನೀಡುವ ಮೂಲಕ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.
ಶಿವನಂಜುಂಡೇಶ್ವರ ವಿದ್ಯಾ ಸಂಸ್ಥೆಯು ಆರೋಪಿ ಮುಖ್ಯ ಶಿಕ್ಷಕನ್ನು ಕರ್ತವ್ಯದಿಂದ ಅಮಾನತು ಮಾಡಿರುವ ಪತ್ರವೊಂದನ್ನು ಸಂಬಂಧ ಪಟ್ಟ ಇಲಾಖೆಗೆ ಕಳಿಸಲಾಗಿದೆ ಎಂದು ಯಲಹಂಕ ತರಳ ಬಾಳು ವಿದ್ಯಾಸಂಸ್ಥೆ ಅಧ್ಯಕ್ಷರಾದ ಪಂಚಾಕ್ಷರಯ್ಯ ತಿಳಿಸಿದ್ದಾರೆ.