ಕ್ರಾಫರ್ಡ್ ಆಸ್ಪತ್ರೆ ರೋಗಿಗಳಿಗೆ ನೀಡುವ ಊಟದಲ್ಲಿ ಬಸವನಹುಳು ಪತ್ತೆ; ಶಾಸಕ ಸಿಮೆಂಟ್ ಮಂಜುರವರಿಂದ ಪರಿಶೀಲನೆ.
ಸಕಲೇಶಪುರ:- ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಊಟದಲ್ಲಿ ಬಸವನಹುಳುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಅಡುಗೆ ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯ ತಿಂಡಿ ಊಟದ ನಿರ್ವಹಣೆಯನ್ನು ಖಾಸಗಿಯವರಿಗೆ ಟೆಂಡರ್ ನೀಡಲಾಗಿದ್ದು ಬು‘ವಾರ ರೋಗಿಯೋರ್ವರಿಗೆ ನೀಡಿದ ಊಟದ ತರಕಾರಿ ಸಾಂಬಾರ್‌ನಲ್ಲಿ ಬಸವನಹುಳು ಪತ್ತೆಯಾಗಿದೆ. ಇದರಿಂದ ಊಟ ಮಾಡುತ್ತಿದ್ದ ರೋಗಿಗಳು ಹುಳುಗಳನ್ನು ನೋಡಿ ಗಾಬರಿಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಹಿತಿ ಪಡೆದ ಶಾಸಕ ಸಿಮೆಂಟ್ ಮಂಜು ಆಸ್ಪತ್ರೆಗೆ ಭೇಟಿ ಪರಿಶೀಲಿಸಿದಾಗ ಆಸ್ಪತ್ರೆಯ ನೀರಿನ ಸಿಂಥೆಟಿಕ್ ಟ್ಯಾಂಕ್ ಒಂದರಲ್ಲಿ ಬಸವನಹುಳುಗಳು ಕಂಡು ಬಂದವು. ಈ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಆಸ್ಪತ್ರೆಯ ವೈದ್ಯಾಧಿಕಾರಿಗೆ ಟ್ಯಾಂಕ್‌ಗಳನ್ನು ಸ್ವಚ್ಚಗೊಳಿಸಲು ಕ್ರಮ ಕೈಗೊಳ್ಳದಿರುವುದಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡರು. ನಂತರ ಮಾತನಾಡಿದ ಶಾಸಕರು ಕ್ರಾಫರ್ಡ್ ಆಸ್ಪತ್ರೆಯಲ್ಲಿ ರೋಗಿಯೋರ್ವರಿಗೆ ಊಟ ನೀಡುವಾಗ ಸಾಂಬಾರ್‌ನಲ್ಲಿ ಬಸವನಹುಳು ಪತ್ತೆಯಾಗಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿದ್ದೇನೆ. ಆಸ್ಪತ್ರೆಯ ಟ್ಯಾಂಕ್‌ಗಳನ್ನು ಕೂಡಲೆ ಸ್ವಚ್ಚಗೊಳಿಸಲು ಆದೇಶಿಸಿದ್ದೇನೆ. ಆಸ್ಪತ್ರೆಯ ಆಡಳಿತಾಧಿಕಾರಿಗಳು ಆಸ್ಪತ್ರೆಯಲ್ಲಿ ಯಾವುದೆ ಲೋಪದೋಷಗಳು ಬರದಂತೆ ಎಚ್ಚರವಹಿಸಬೇಕು ಇಲ್ಲದಿದ್ದಲ್ಲಿ ಆಡಳಿತ ಅಧಿಕಾರಿಯ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಗುತ್ತಿಗೆದಾರರ ವಿರುದ್ದ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು.