ಕಾಡಾನೆ ಸಮಸ್ಯೆ ಬಗೆಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಇಚ್ಛಾ ಶಕ್ತಿಯಿಲ್ಲ: ವಕೀಲ ಹಾಗೂ ಜೆಡಿಎಸ್ ಮುಖಂಡ ಕವನ್ ಗೌಡ
ಸಕಲೇಶಪುರ: ಕಾಡಾನೆ ಸಮಸ್ಯೆ ಬಗೆಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಇಚ್ಛಾ ಶಕ್ತಿಯ ಕೊರತೆಯಿರುವುದಿರಂದ ಕಾಡಾನೆ ಸಮಸ್ಯೆ ಬಗೆಹರಿಯದ ಸಮಸ್ಯೆಯಾಗಿದೆ ಎಂದು ವಕೀಲ ಹಾಗೂ ಜೆಡಿಎಸ್ ಮುಖಂಡ ಕವನ್ ಗೌಡ ಹೇಳಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2012 ರಲ್ಲೆ ಸರ್ಕಾರದಿಂದ ಕಾಡಾನೆ ಟಾಸ್ಕ್ ಪೋರ್ಸ್ ಸಮಿತಿ ರಚನೆಯಾಗಿ ಕಾಡಾನೆ ಸಮಸ್ಯೆ ಏಕೆ ಉಂಟಾಗುತ್ತಿದೆ ಹಾಗೂ ಸಮಸ್ಯೆ ಬಗೆಹರಿಸುವುದು ಹೇಗೆಂದು ವರದಿ ತಯಾರಿಸಿ ಹೈಕೋರ್ಟ್ ಗೆ ನೀಡಲಾಗಿತ್ತು. ಸುಮಾರು 13 ಜನರನ್ನು ಒಳಗೊಂಡ ಈ ಸಮಿತಿ 2012ರಲ್ಲೆ ಕಾಡಾನೆ ಸಮಸ್ಯೆ ಬಗೆಹರಿಸಲು ಯೋಜನೆಯೊಂದನ್ನು ರೂಪಿಸಿ ವರದಿ ನೀಡಿದ್ದರು ಯಾವುದೆ ಪ್ರಯೋಜನವಾಗಿಲ್ಲ. ವರದಿ ತಯಾರು ಮಾಡಲು ಈ ಸಮಿತಿ ಲಕ್ಷಾಂತರ ರೂ ವ್ಯಯಿಸಿದೆ. ಆದರೂ ಸಹ ಈ ಸಮಿತಿಯ ವರದಿಯನ್ನು ಸರ್ಕಾರ ಅನುಷ್ಠಾನಗೊಳಿಸದೆ ಮತ್ತೆ ಮತ್ತೆ ಹೊಸ ಸಮಿತಿಗಳನ್ನು ರಚಿಸುತ್ತಿರುವುದು ಎಷ್ಟು ಸರಿ? 2012 ರ ಟಾಸ್ಕ್ ಪೋರ್ಸ್ ವರದಿಯಲ್ಲಿ ಕಾಡಾನೆ ಪೀಡಿತ ಪ್ರದೇಶಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ ಎಲ್ಲಾ ಜಲವಿದ್ಯುತ್ ಯೋಜನೆಗಳನ್ನು ನಿಲ್ಲಿಸಲು ವರದಿ ಸಲ್ಲಿಸಲಾಗಿತ್ತು. ಆದರೆ 2012ರ ವರದಿಯ ಅಂಶಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಇದೀಗ ಸರ್ಕಾರ ರಚನೆ ಮಾಡಿರುವ ಕಾಡಾನೆ ಟಾಸ್ಕ್ ಪೋರ್ಸ್ ನಿಂದ ಸ್ಥಳೀಯ ರೈತರಿಗೆ ಯಾವುದೆ ಉಪಯೋಗವಿಲ್ಲ. ಸರ್ಕಾರ 2012 ರ ವರದಿಯಲ್ಲಿರುವ ಅಂಶಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಿದರೆ ಮಾತ್ರ ಕಾಡಾನೆ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಸಾಧ್ಯ ಎಂದಿದ್ದಾರೆ.