ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
ಸಕಲೇಶಪುರ : ಕೇಂದ್ರ ಸರ್ಕಾರ ಗ್ಯಾಸ್, ಪೆಟ್ರೋಲ್ ಬೆಲೆ ಏರಿಕೆ ಮೂಲಕ ಜನ ಸಾಮಾನ್ಯರ ಬದುಕಿಗೆ ಹೊರೆಯಾಗುವಂತೆ ಮಾಡಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಗುರುವಾರ ಪಟ್ಟಣದ ಅಂಚೆ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ಕೆಲಕಾಲ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರಸ್ತೆ ತಡೆದು ಆಕ್ರೋಶ ಹೊರ ಹಾಕಿದರು.
ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರಂಜಿತ್ ಗೊರೂರು ಮಾತನಾಡಿ,ಕೇಂದ್ರ ಸರ್ಕಾರ ಬಡವರ ಬದುಕಿನ ಮೇಲೆ ಚೆಲ್ಲಾಟವಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿಗರು ಬೇರೆಯವರನ್ನು ದೂಷಿಸುತ್ತಾರೆ. ಅವರು ಸರಿಯಾದ ಕೆಲಸ ಮಾಡುವುದಿಲ್ಲ. ಬಿಜೆಪಿ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸವನ್ನು ಮಾಡುತ್ತಿದೆ. ಗ್ಯಾಸ್ ಬೆಲೆಯನ್ನು ಒಂದೇ ಸಲ 50 ರು. ಹೆಚ್ಚಳ ಮಾಡಿದರ ಪರಿಣಾಮ ಬಡವರು, ರೈತರು, ಕೂಲಿ ಕಾರ್ಮಿಕರಿಗೆ ಆಗುತ್ತದೆ. ರಾಜ್ಯ ಸರ್ಕಾರ ಏನೇ ಮಾಡಿದರೂ ಜನರ ಒಳಿತಿಗಾಗಿ ಮಾಡುತ್ತದೆ ಎಂದರು.ಕಚ್ಚಾತೈಲದ ಬೆಲೆ ಕುಸಿತದ ಕಾರಣದಿಂದ ದೇಶದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 2ರಷ್ಟು ಇಳಿಕೆಯಾಗಿದೆ. ಈ ಬೆಲೆ ಕುಸಿತದ ಲಾಭವನ್ನು ಜನ ಸಾಮಾನ್ಯರಿಗೆ ವರ್ಗಾಯಿಸಲು ಮೋದಿ ಅವರಿಗೆ ಇಷ್ಟವಿಲ್ಲ. ಹೀಗಾಗಿ ಎರಡೂ ಇಂಧನಗಳ ಮೇಲೆ 2ರಷ್ಟು ಅಬಕಾರಿ ಸುಂಕವನ್ನು ಹೆಚ್ಚಿಸಿದ್ದಾರೆ ಎಂದರು.
ಗಾಯದ ಮೇಲೆ ಬರೆ:
ಹವಾಮಾನ ವೈಪರೀತ್ಯ, ಅತಿವೃಷ್ಠಿ, ಅನಾವೃಷ್ಟಿಗಳಿಂದ ರೈತರು ಬದುಕು ದುಸ್ತರವಾಗುತ್ತಿದೆ. ಸರಿಯಾದ ಬೆಳೆ ಮತ್ತು ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಈ ರೀತಿ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದೆ ಎಂದು ತಾಲೂಕು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಹೆನ್ನಲಿ ಧರ್ಮ ಆರೋಪಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ದರ್ಶನ್,ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಬ್ಬೀರ್, ತಾಲೂಕು ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಬೈಕೆರೆ ಮಹೇಶ್ ಸೇರಿದಂತೆ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರಾದ ವೇಣುಗೋಪಾಲ್ , ದರ್ಶನ್, ಮನೋಹರ್ ಸೇರಿದಂತೆ ಮುಂತಾದವರಿದ್ದರು.