ಕಣದಲ್ಲಿ ಸಂಗ್ರಹಿಸಿಟ್ಟಿದ್ದ ಭತ್ತದ ಚೀಲಗಳನ್ನು ಚೆಲ್ಲಾಪಿಲ್ಲಿ ಮಾಡಿದ ಕಾಡಾನೆಗಳು
ಸಕಲೇಶಪುರ:ಕಣದಲ್ಲಿ ಇಟ್ಟಿದ್ದ ಭತ್ತದ ಚೀಲಗಳನ್ನು ಕಾಡಾನೆಗಳ ಹಿಂಡು ಚೆಲ್ಲಾಪಿಲ್ಲಿ ಮಾಡಿರುವ ಘಟನೆ ತಾಲೂಕಿನ ಬೆಳಗೋಡು ಹೋಬಳಿ ಎಡೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿಂಗರಾಜು ಎಂಬುವರ ಜಮೀನಿಗೆ ನುಗ್ಗಿದ ಕಾಡಾನೆಗಳು ಅಪಾರ ಪ್ರಮಾಣದ ಭತ್ತ ಹಾಗೂ ಕಾಫಿಯನ್ನು ನಾಶಪಡಿಸಿವೆ.ಅಲ್ಲದೆ ಕಣದಲ್ಲಿ ಇಟ್ಟಿದ್ದ ಸುಮಾರು 40 ಕ್ಕೂ ಹೆಚ್ಚು ಭತ್ತದ ಚೀಲಗಳನ್ನು ಚೆಲ್ಲಾಪಿಲ್ಲಿ ಮಾಡಿವೆ. ಇದರಿಂದ ರೈತನಿಗೆ ಅಪಾರವಾದ ನಷ್ಟ ಉಂಟಾಗಿದೆ. ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು ಕಾಡಾನೆಗಳ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಶಾಶ್ವತ ಪರಿಹಾರ ಹುಡುಕದ ಹಿನ್ನೆಲೆಯಲ್ಲಿ ರೈತರು ಜನಸಾಮಾನ್ಯರು ದಿನನಿತ್ಯ ಆತಂಕದಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.