ಸಕಲೇಶಪುರ: ಹೊಸ ವರ್ಷ ಸಂಭ್ರಮಾಚರಣೆ ಸಂಧರ್ಭದಲ್ಲಿ ನಿಬಂದನೆಗಳನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಕಲೇಶಪುರ ಉಪವಿಭಾಗದ ಸಹಾಯಕ ಪೋಲಿಸ್ ಅಧೀಕ್ಷಕರಾದ ಎಚ್.ಎನ್ ಮಿಥುನ್ ಹೇಳಿದರು.
ಪಟ್ಟಣದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ವಿವಿಧ ರೆಸಾರ್ಟ್ ಮತ್ತು ಹೋಂಸ್ಟೇ ಮಾಲಿಕರು, ಕ್ಲಬ್ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೊಸ ವರ್ಷದ ಪಾರ್ಟಿ ಆಯೋಜಿಸುವವರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆದಿರಬೇಕು.
ಈ ರೀತಿ ಪಾರ್ಟಿ ಆಯೋಜಿಸುವವರು ಸಮರ್ಪಕ ಭದ್ರತಾ ವ್ಯವಸ್ಥೆ ಕೈಗೊಳ್ಳಬೇಕು. ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಪಾರ್ಟಿಗೆ ಬರುವವರು ಕಡ್ಡಾಯವಾಗಿ ಎರಡು ಕೋವಿಡ್ ಲಸಿಕೆಗಳನ್ನು ಪಡೆದಿರಬೇಕು. ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕು. ಮಹಿಳೆಯರ ರಕ್ಷಣೆಗೆ ಮಹಿಳಾ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವವರ ಜತೆ ಭದ್ರತಾ ಸಿಬ್ಬಂದಿಗಳು ಉತ್ತಮ ನಡವಳಿಕೆ ಹೊಂದಿರುವಂತೆ ತರಬೇತಿ ನೀಡಬೇಕು.
ಹೊಸ ವರ್ಷದ ಪಾರ್ಟಿಯಲ್ಲಿ ಯಾವುದೇ ಡ್ರಗ್ಸ್ ಅಥವಾ ಮಾದಕ ಸೇವನೆ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು.ಪಾರ್ಟಿ ನಡೆಯುವ ಸ್ಥಳದಲ್ಲಿ ಸಾಕಷ್ಟು ಬೆಳಕು ಇರಬೇಕು. ಅಪರಾಧ ಹಿನ್ನೆಲೆ ಇರುವವರ ತಪಾಸಣೆ ಮಾಡಬೇಕು. ಪಾರ್ಟಿ ಸಮಯದಲ್ಲಿ ಯಾರಾದರೂ ಅನುಮಾನಸ್ಪದವಾಗಿ ಕಂಡುಬಂದರೆ, ಅಂತಹ ಚಲನವಲನ ಕಂಡುಬಂದರೆ ತಕ್ಷಣ ಹತ್ತಿರದ ಪೊಲೀಸ್ ಸ್ಟೇಷನ್ಗೆ ಕರೆ ಮಾಡಬೇಕು ಅಥವಾ 112 ಸಂಖ್ಯೆಗೆ ಡಯಲ್ ಮಾಡಬೇಕು. ಕಾರ್ಯಕ್ರಮ ನಡೆಯುವಲ್ಲಿ, ಸ್ಥಳದ ಸಾಮರ್ಥ್ಯಕ್ಕಿಂತ ಹೆಚ್ಚಿನ ಅತಿಥಿಗಳಿಗೆ ಅವಕಾಶ ನೀಡಬಾರದು. ಹೊಸ ವರ್ಷದ ರಾತ್ರಿಯಂದು ರಾತ್ರಿ 1 ಗಂಟೆವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶವಿದ್ದು ಮದ್ಯದ ಅಂಗಡಿಗಳು ಕಡ್ಡಾಯವಾಗಿ ರಾತ್ರಿ 10 ಗಂಟೆಗೆ ಬಾಗಿಲು ಹಾಕಬೇಕಾಗಿದೆ.
ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ವನ್ಯಜೀವಿಗಳಿಗೆ ತೊಂದರೆಯಾಗದಂತೆ ಡಿಜೆ ಬಳಸಬೇಕು ಮತ್ತು ಪಾರ್ಟಿಗೆ ಬರುವವರು ಅರಣ್ಯದ ಒಳಗೆ ಹೋಗಿ ಸಂಭ್ರಮಾಚರಣೆಗೆ ಅವಕಾಶವಿರುವುದಿಲ್ಲ.ಸಂಭ್ರಮಾಚರಣೆ ವೇಳೆ ಅವಘಡ ಸಂಭವಿಸಿದರೆ ತಕ್ಷಣಕ್ಕೆ ಸ್ಪಂದಿಸಲು ಆರೋಗ್ಯ ಇಲಾಖೆ ಸನ್ನದವಾಗಿರುವಂತೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಮಾರ್ಗಸೂಚಿಗಳನ್ನು ಮೀರಿ ಯಾರಾದರು ತಪ್ಪು ಮಾಡುವುದು ಕಂಡು ಬಂದರೆ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.