ಅಪರೂಪದ ಕಾಮಧೇನು ಹಸುಗವಳ್ಳಿ ತೋಟದ ದಿ||ಹೆಚ್. ಎಂ.ಮಲ್ಲೇಶ್ವರಪ್ಪನವರು ಧರ್ಮಪತ್ನಿ ದಿ|| ಶಿವಮ್ಮನವರು.
ಶಿವಮ್ಮ ನವರಂತ ಮಾತೃ ಹೃದಯಿ ಕಾಮಧೇನು ಬಗ್ಗೆ ಬರೆಯಲು ನಾನು ಬಹಳ ಚಕ್ಕವನು.ಬದುಕಿದ್ದಾಗಲೇ ಪ್ರಕಟಿಸಿ ಇವರಿಗೆ ತೋರಿಸಬೇಕೆಂದು ಶಿವಮ್ಮ ನವರ ಪುತ್ರರಾದ ಬಿ.ಎಂ. ಮೋಹನ್ ಕುಮಾರ್ ಅವರೊಂದಿಗೂ ಮಾತನಾಡಿದ್ದೆ,ಮಹಾತಾಯಿಯ ನಿಧನದ ನಂತರ ಬರೆಯಲು ದುಖಃವೇನುಸುತ್ತಿದೆ.
ಪುರುಷ ಪ್ರಧಾನ ಸಮಾಜದೊಳಗೆ ಪುರುಷರದ್ದೇ ಮೇಲುಗೈ, ಹೆಣ್ಣನ್ನು ಪ್ರಕೃತಿಗೆ ಹೋಲಿಸಿ ಪ್ರಕೃತಿ ಪುರುಷ ಸಂಬಂಧವನ್ನು ಕಲ್ಪಿಸಲಾಗಿದೆ. ಇದರಿಂದ ಆಳುವ, ಆಳಿಸಿಕೊಳ್ಳುವ
ಪರಿಕಲ್ಪನೆಗೆ ಎಡೆಮಾಡಿಕೊಟ್ಟಿತು. ಜಗತ್ತಿನ ಬಹುತೇಕ ಸಮಾಜ ಹಾಗೂ ರಾಜಕೀಯ ಚಿಂತಕರು ಸ್ತ್ರೀಯನ್ನು ಒಂದು ಶಾಪವೆಂದೇ ಭಾವಿಸಿದರು. ಅವಳನ್ನು ಪಿಶಾಚಿ ಎಂತಲೂ
ಸಂಭೋದಿಸಿದರು. ಇದೇ ಸ್ತ್ರೀ ಪುರುಷನೊಂದಿಗೆ ಬದುಕು ಸಾಗಿಸುವಾಗ ಧಾರ್ಮಿಕ ಚೌಕಟ್ಟಿನಲ್ಲಿ ಕೆಲ ಸೌಲಭ್ಯಗಳಿಂದ ವಂಚಿಸಲ್ಪಟ್ಟಳು, ಸಾಹಿತ್ಯ ಲೋಕದಲ್ಲೂ ಹೆಣ್ಣು ಅಡುಗೆಮನೆಗೆ ಸೀಮಿತ, ಆಕೆ ಮಕ್ಕಳನ್ನು ಹಡೆಯುವ ಯಂತ್ರ ಎಂದು ಪರಿಗಣಿಸಲಾಯಿತು.
ಇದಕ್ಕೆ ತದ್ವಿರುದ್ಧವಾಗಿ 12ನೆಯ ಶತಮಾನದ ಬಸವಾದಿ ಪ್ರಮಥರು ಹೆಣ್ಣನ್ನು ಹೀಗೆ ಬಣ್ಣಿಸಿದರು – “ಹೆಣ್ಣು ಹೆಣ್ಣ, ಹೆಣ್ಣು ರಕ್ಕಸಿಯಲ್ಲ, ಹೆಣ್ಣು ಸಾಕ್ಷಾತ್ ಕಪಿಲಸಿದ್ಧ
ಮಲ್ಲಿಕಾರ್ಜುನ “. ಅಲ್ಲಿ ಲಿಂಗಬೇಧಕ್ಕೆ ಅವಕಾಶವಿಲ್ಲ ಎಂದು ಭಾವಿಸಲಾಯಿತು. ” ಗಡ್ಡ ಮೀಸೆ ಬಂದರೆ ಗಂಡಬರು, ಮಲೆ ಮುಡಿ ಬಂದರೆ ಹೆಣ್ಣೆಂಬರು. ಆತ್ಮಕ್ಕೆ ಯಾವ ಲಿಂಗ ‘
ಎಂದು ಪ್ರಶ್ನಿಸಲಾಯಿತು. ” ಸತಿ ಪತಿಗಳಲ್ಲೊಂದಾದ ಭಕ್ತಿ ಹಿತವಾಗಿಪ್ಪದು ಶಿವಂಗೆ”,ಮುಂತಾದ ಹೊಸ ವಿಚಾರಗಳು ಹುಟ್ಟಿಕೊಂಡವು. ಅನುಭವ ಮಂಟಪದ ಸಂದರ್ಭದಲ್ಲಿ
ಸ್ತ್ರೀಯರದು ಸಮಪಾಲು, ಪುರುಷನೊಟ್ಟಿಗೆ ವಿಚಾರ ಮಾಡುವ, ಚರ್ಚಿಸುವ ಅವಕಾಶ,ಹಳೆಯ ಮೌಲ್ಯಗಳಿಗೆ ವಿರುದ್ಧವಾದ ಹೊಸ ಮೌಲ್ಯಗಳ ಸ್ಥಾಪನೆಯಾಯಿತು.
ಇಂತಹ ಮೌಲ್ಯಗಳ ಪ್ರತಿರೂಪವಾಗಿ ಅವತರಿಸಿದವರು ಕಾಮಧೇನು ಹಸುಗವಳ್ಳಿ ತೋಟದ ಹೆಚ್.ಎಂ.ಮಲ್ಲೇಶಪ್ಪನವರ ಧರ್ಮಪತ್ನಿ ಶ್ರೀಮತಿ ಶಿವಮ್ಮ ನವರ,
ಬಾಳ್ಳುಪೇಟೆಯ ಹಸುಗವಳ್ಳಿ ಗ್ರಾಮದ ಶ್ರೀ ಹೆಚ್. ಎಂ. ಮಲ್ಲೇಶ್ವರಪ್ಪನವರು ಕೃಷಿಕೃತ್ಯ ಕಾಯಕವ ಮಾಡಿಕೊಂಡು ಕೃಷಿಯ ಜೊತೆಗೆ ಧಾರ್ಮಿಕ ಪ್ರಜ್ಞೆ ಉಳ್ಳವರಾಗಿ,ದಾನ ಧರ್ಮದ ಯಜ್ಞವನ್ನು ಮಾಡುತ್ತಾ ಸಾರ್ವಜನಿಕವಾಗಿ ಹಲವಾರು ಪ್ರಗತಿಪರ ಕಾರ್ಯಗಳನ್ನು ಮಾಡಿದಂತಹ ಜನಾನುರಾಗಿಗಳು.
ಶ್ರೀ ಹೆಚ್.ಎಂ. ಮಲ್ಲೇಶಪ್ಪನವರ ಪತ್ನಿಯವರಾದ ಶ್ರೀಮತಿ ಶಿವಮ್ಮನವರು ಹೆಬ್ಬಾಸಾಲೆ ಗ್ರಾಮದ ಕೃಷಿಕರಾದ ನಂಜೇಗೌಡ ಮತ್ತು ನಂಜುಮ್ಮ ದಂಪತಿಗಳ ಮೊದಲನೆಯ ಮಗಳಾಗಿ ಜನಿಸಿ 1950ನೇ ಇಸವಿಯಲ್ಲಿ ಶ್ರೀ ಎಚ್.ಎಂ. ಮಲ್ಲೇಶಪ್ಪನವರನ್ನು ಕೈ ಹಿಡಿಯುತ್ತಾರೆ.ಪತಿಯ ಜೊತೆ ಸುಖ ಸಂಸಾರ ನಡೆಸುತ್ತಾ ಮನೆ ತೋಟಗಳ ನಿರ್ವಹಣೆ ಜೊತೆಗೆ ದಾನ ಧರ್ಮಗಳೊಂದಿಗೆ ಕೈಜೋಡಿಸುತ್ತಾ ಸೌಜನ್ಯಯುತವಾಗಿ,ಮಾದರಿಯಾದ ದಾಂಪತ್ಯ ಜೀವನ ನಡೆಸುತ್ತಾ ಪಶು ಸಂಗೋಪನೆಯಲ್ಲಿ ಬಹಳ ಆಸಕ್ತಿಯಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
ಕೃಷಿಕರ ಮನೆಯಲ್ಲಿ ಗೋಸಂಪತ್ತಿದ್ದರೆ ಕೃಷಿಕನ ಸಂಪತ್ತು ಹೆಚ್ಚುತ್ತದೆ ಎಂಬುದು ಸತ್ಯ ಕೂಡ. ಶ್ರೀಮಂತಿಕೆಯ ಐಷಾರಾಮಿ ಜೀವನ ನಡೆಸಬಹುದಾಗಿದ್ದ ಶಿವಮ್ಮನವರು ಎತ್ತು,ಹೆಮ್ಮೆ,ಹಸು,ಕರು,ಸಗಣಿ, ಗಂಜಲ,ಗೊಬ್ಬರ ಇತ್ಯಾದಿಗಳಲ್ಲಿ ದೇವರನ್ನು ಕಾಣುತ್ತಾ ತಮ್ಮ ಕೃಷಿಗೆ ಬೇಕಾದ ಎಲ್ಲಾ ಗೊಬ್ಬರಗಳನ್ನ ಮತ್ತು ಜೊತೆಗೆ ಮನೆಗೆ ಬೇಕಾದ ಹಾಲು,ಬೆಣ್ಣೆ,ಮೊಸರು ಮಜ್ಜಿಗೆಯನ್ನು ತಯಾರು ಮಾಡಿಕೊಳ್ಳುತ್ತಾ ಸುತ್ತಮುತ್ತ ಗ್ರಾಮಗಳಿಗೆ ಮಾದರಿಯಾಗುತ್ತಾ ನಡೆದರು.ಮೊದಲಿಗೆ ಎರಡು ಹಸುಗಳಿಂದ ಪ್ರಾರಂಭವಾದ ಹೈನುಗಾರಿಕೆ ಕೊನೆಗೆ 40 50 ಹಸುಗಳನ್ನು ಸಾಕಿ ಪಾಲನೆ ಪೋಷಣೆ ಮಾಡುತ್ತ ಜನಪ್ರಿಯಗೊಂಡರು. ಬಾಳ್ಳುಪೇಟೆಯಲ್ಲಿ ಹಾಲು ಉತ್ಪಾದಕರ ಸಂಘ ರಚನೆಯಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ 105 ಲೀಟರ್ ಹೆಚ್ಚು ಹಾಲನ್ನು ಇವರೊಬ್ಬರೇ ಪೂರೈಸುತ್ತಿದ್ದರು. ಹೈನುಗಾರಿಕೆಯ ಇವರ ಯಶಸ್ಸಿನ ಕಾರ್ಯವನ್ನು ಬೆಂಗಳೂರಿನ ಕ್ಷೀರಸಾಗರ ಎಂಬ ಪತ್ರಿಕೆಯವರು ಶಿವಮ್ಮನವರ ಯಶೋಗಾಥೆಯ ಬಗ್ಗೆ 1978 ರಲ್ಲಿ ಪ್ರಕಟಿಸಿ ಬರೆದದ್ದು ಒಂದು ಇತಿಹಾಸ. ಜೊತೆಗೆ ಮನೆಯ ಅಂದ ಚಂದ ಹೆಚ್ಚಿಸುವ ಉದ್ಯಾನವನದ ಅಚ್ಚುಕಟ್ಟಾದ ನಿರ್ವಹಣೆ,ಕಾಫಿ ಒಣಗಿಸುವ ಕಣಗಳ ನಿರ್ವಹಣೆ ಜೊತೆಯಲ್ಲಿ ಇವರ ಪುತ್ರರುಗಳಾದ ಮೋಹನ್ ಕುಮಾರ್ ಹಾಗೂ ಮಹೇಶ್ ಕುಮಾರ್ ರವರು ಹಾಸನದಲ್ಲಿ ಕೊಂಡುಕೊಂಡಿದ್ದ ಮಲ್ಲಿಕಾರ್ಜುನ ಚಿತ್ರಮಂದಿರವನ್ನು ಕೂಡ ಇವರು ದಕ್ಷತೆಯಿಂದ ನಡೆಸಿ ಹೆಣ್ಣು ಶ್ರದ್ದೆಯಿಂದ ದೈರ್ಯದಿಂದ ಮುನ್ನಡೆದರೆ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಯಾಗಬಹುದು ಎಂಬುದನ್ನ ಸಾಬೀತುಪಡಿಸಿದರು. ಇವರ ಧೈರ್ಯ ಕಾರ್ಯ ದಕ್ಷತೆಯನ್ನು ಹಲವರು ಇಂದು ಕೂಡ ಮೆಚ್ಚುಗೆಯಿಂದ ಗೌರವಪೂರ್ಣವಾಗಿ ನೆನಸಿಕೊಳ್ಳುತ್ತಾರೆ.
ಮಲೆನಾಡಿನ ಈ ಹೆಣ್ಣು ಮಗಳು ಜೀವನಪೂರ್ತಿ ಹಸುಗಳನ್ನು ಸಾಕುತ್ತಾ ಬಾಳನ್ನು ಹಸನು ಮಾಡಿದರು.ಕೃಷಿಯಲ್ಲಿ ತೊಡಗುವ ಮಹಿಳೆಯರಿಗೆ ಇಂದಿಗೂ ಸ್ಪೂರ್ತಿಯಾಗಿದ್ದರು. ಶಿವಮ್ಮನವರು ಬಾಳ್ಳುಪೇಟೆ ಸುತ್ತಮುತ್ತ ಯಾವುದೇ ಮನೆಗಳಲ್ಲಿ ಸಂತಸದ ಕಾರ್ಯಕ್ರಮಗಳಿರುವುದು ದುಃಖದ ಕಾರ್ಯಗಳಿರಬಹುದು ಹಸುಗವಳ್ಳಿ ಶಿವಮ್ಮನವರ ಮನೆಯಿಂದ ಹಾಲು,ಮಜ್ಜಿಗೆ ಬರುತ್ತಿತ್ತು.
ಶ್ರೇಷ್ಠ ಮನೆತನಕ್ಕೆ ತಕ್ಕ ಸೊಸೆಯಾಗಿ, ಪತಿಗೆ ತಕ್ಕಂತೆ ಅವರನ್ನು ಅನುಸರಿಸಿ,ರತ್ನದಂತಹ ಮಕ್ಕಳನ್ನು ಸಮಾಜಕ್ಕೆ ಬಳುವಳಿಯಾಗಿ ಕೊಟ್ಟು, ಅವರು ಮನೆತನದ ಹೆಸರನ್ನು
ಎತ್ತರಕ್ಕೆ ಮುಟ್ಟಿಸುವಂತೆ ಬೆಳೆಸಿ ತಮ್ಮ ಎಲ್ಲಾ ನಡೆತೆಯಲ್ಲೂ ಪರಿಪೂರ್ಣತೆಯನ್ನು ತೋರಿಸಿದ್ದಾರೆ. ಇಂತಹ ತಾಳ್ಮೆಯ ಪುತ್ಥಳಿಯನ್ನು ನೋಡಿ ನಾನು ಅಂದುಕೊಳ್ಳುತ್ತೇನೆ
“ಹೆಣ್ಣು ಮಗಳು” ಎಂದರೆ ಹೀಗಿರಬೇಕು. ಭಾವಪೂರ್ಣ ಶ್ರದ್ಧಾಂಜಲಿಗಳು.
ಯಡೇಹಳ್ಳಿ”ಆರ್”ಮಂಜುನಾಥ್.
9901606220