ಡಿ.14 ರಂದು ಸಕಲೇಶಪುರದಲ್ಲಿ ನಮ್ಮ ಕ್ಲಿನಿಂಗ್ ಉದ್ಘಾಟನೆ.
ಶಾಸಕ ಎಚ್. ಕೆ ಕುಮಾರಸ್ವಾಮಿಯಿಂದ ನಮ್ಮ ಕ್ಲಿನಿಕ್ ಗೆ ಚಾಲನೆ.
ನಗರ ಪ್ರದೇಶದ ಬಡ ಜನರ ಆರೋಗ್ಯ ಸಂಜೀವಿನಿಯಾಗಿ ಕಾರ್ಯನಿರ್ವಹಿಸುವ ನಮ್ಮ ಕ್ಲಿನಿಕ್‌ಗಳು ಡಿಸೆಂಬರ್ 14 ರಂದು ಬೆಳಗ್ಗೆ 11 ಗಂಟೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಲೋಕಾರ್ಪಣೆಯಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸಕಲೇಶಪುರ ಅರೆಹಳ್ಳಿ ರಸ್ತೆಯಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನಮ್ಮ ಕ್ಲಿನಿಕ್ ಶಾಸಕ ಎಚ್ ಕೆ ಕುಮಾರಸ್ವಾಮಿ ಅವರಿಂದ ಉದ್ಘಾಟನೆಗೊಳ್ಳಲಿದೆ ಎಂದು ತಾಲೂಕು ವೈದ್ಯಾಧಿಕಾರಿ ಮಹೇಶ್ ತಿಳಿಸಿದ್ದಾರೆ.
ಒಟ್ಟು 243 ನಮ್ಮ ಕ್ಲಿನಿಕ್‌ಗಳು ಕಾರ್ಯಚರಣೆ ಮಾಡಲಿದ್ದು, ಜನವರಿ ಎರಡನೇ ವಾರದೊಳಗೆ ಇವುಗಳು ಜನ ಸೇವೆಗೆ ಲಭ್ಯವಾಗುವಂತೆ ಕೆಲಸ ನಡೆಯುತ್ತಿದ್ದು, ಕನಿಷ್ಠ 150 ಕ್ಲಿನಿಕ್‌ಗಳು ಜನರ ಸೇವೆಗೆ ಲಭ್ಯವಿರುವುದು ಖಚಿತ. ಈ ಕ್ಲಿನಿಕ್‌ಗಳಿಂದ ದುರ್ಬಲ ವರ್ಗದವರಿಗೆ, ಶ್ರಮಕರಿಗೆ, ಕೂಲಿ ಕಾರ್ಮಿಕರಿಗೆ ಸೇರಿದಂತೆ ಹಲವರಿಗೆ ಆರೋಗ್ಯ ಸೇವೆ ಸಿಗಲಿದೆ. 10 ರಿಂದ 20 ಸಾವಿರ ಜನಸಂಖ್ಯೆಗೆ ಒಂದರಂತೆ ನಮ್ಮ ಕ್ಲಿನಿಕ್‌ಗಳು ಆರಂಭವಾಗಲಿದೆ ಎಂದು ಹೇಳಿದರು.
ನಮ್ಮ ಕ್ಲಿನಿಕಿನ ಸೌಲಭ್ಯಗಳು:
ನಮ್ಮ ಕ್ಲಿನಿಕ್‌ಗಳಲ್ಲಿ 12 ರೀತಿಯ ಆರೋಗ್ಯ ಸೇವೆಗಳು ಲಭ್ಯ ಇರಲಿದೆ. ತಲಾ ಒಬ್ಬ ವೈದ್ಯಾಧಿಕಾರಿ, ನರ್ಸಿಂಗ್ ಸ್ಟಾಫ್, ಲ್ಯಾಬ್ ಟೆಕ್ನಿಷಿಯನ್, ಡಿ ದರ್ಜೆ ನೌಕರರು ಇಲ್ಲಿ ಇರಲಿದ್ದಾರೆ. ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಶಿಶುವಿನ ಸಮಗ್ರ ಆರೈಕೆ, ಬಾಲ್ಯ ಮತ್ತು ಹದಿಹರಯದವರಿಗೆ ಸೇವೆಗಳು, ಸಾರ್ವತ್ರಿಕ ಲಸಿಕಾಕರಣದ ಸೇವೆಗಳು, ಕುಟುಂಬ ಕಲ್ಯಾಣ ಗರ್ಭ ನಿರೋಧಕ ಸೇವೆಗಳು, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಕಾಯಿಲೆಗಳಿಗೆ ಸೇವೆ, ಮಧುಮೇಹ, ರಕ್ತದೊತ್ತಡಕ್ಕೆ ಚಿಕಿತ್ಸೆ , ಸಕ್ಕರೆ ಕಾಯಿಲೆ, ದೀರ್ಘಾವಧಿ ಕಾಯಿಲೆಗಳು, ಬಾಯಿ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್, ಬಾಯಿಯ ಆರೋಗ್ಯ ಸಮಸ್ಯೆಗಳು ಮತ್ತು ಸೇವೆಗಳು, ಕಣ್ಣಿನ ತಪಾಸಣೆ, ಮೆಂಟಲ್ ಹೆಲ್ತ್‌ಗೆ ಸಂಬಂಧಿಸಿದ ಮೂಲಭೂತ ಸೇವೆಗಳು ಸೇರಿದಂತೆ ಬೇರೆ ಆಸ್ಪತ್ರೆಗಳಿಗೆ ರೆಫರಲ್ ಸೇವೆಗಳು ಇಲ್ಲಿ ಲಭ್ಯವಾಗಲಿದೆ ಎಂದರು.
ವೃದ್ಧಾಪ್ಯ ಆರೈಕೆ, ತುರ್ತು ವೈದ್ಯಕೀಯ ಸೇವೆಗಳು, ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಔಷಧಗಳು ಸಂಪೂರ್ಣ ಉಚಿತವಾಗಿರಲಿದೆ. 14 ಪ್ರಯೋಗ ಶಾಲಾ ಪರೀಕ್ಷೆಗಳು ಇಲ್ಲಿ ಲಭ್ಯವಿದ್ದು ಟೆಲಿ ಕನ್ಸಲ್ಟೇಷನ್ ಸರ್ವೀಸಸ್, ಕ್ಷೇಮ ಚಟುವಟಿಕೆಗಳು ಕೂಡ ಉಚಿತವಾಗಿವೆ. ಸೋಮವಾರದಿಂದ ಶನಿವಾರ ತನಕ ಬೆಳಗ್ಗೆ 9 ರಿಂದ ಸಂಜೆ 4.30ರ ತನಕ ಈ ಸೇವೆ ಲಭ್ಯವಿದ್ದು ಭಾನುವಾರ ರಜೆ ಇರಲಿದೆ. ಬಡಾವಣೆಯ ವ್ಯಾಪ್ತಿಯಲ್ಲಿ ಈ ಕ್ಲಿನಿಕ್‌ಗಳು ತಲೆ ಎತ್ತುವುದರಿಂದ ಸುಲಭವಾಗಿ ಆರೋಗ್ಯ ಸೇವೆ ಸಿಗಲಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಸಮಯದಲ್ಲಿ 100ಕ್ಕೂ ಹೆಚ್ಚು ಕ್ಲಿನಿಕ್‌ಗಳು ಉದ್ಘಾಟನೆ ಆಗುತ್ತಿರುವುದು ಸಾರ್ವಕಾಲಿಕ ದಾಖಲೆಯಾಗಲಿದೆ ಎಂದರು.