ಮಲೆನಾಡು ಭಾಗದ ಕಾಡಾನೆಗಳ ಹಾವಳಿಯ ಕುರಿತು ಶೃತಿ ರಂಜನ್ ಅವರಿಂದ ಅದ್ಭುತ ಲೇಖನ 👇👇👇
– ಹೆತ್ತೂರಿನಲ್ಲಿ ಮುಂದುವರೆದ ಕಾಡಾನೆ ದಾಳಿ
– ಇಂದು ಕಾಡಾನೆಗಳ ಹಿoಡು ಮರ್ಕ್ ಹಳ್ಳಿ ಕಲ್ಲುತೋಟ ಬಸರಿ ಹಡುಲು ಆಸುಪಾಸು ಮುಂಜಾನೆಯಿಂದ ಅಬ್ಬರ ಮಾಡುತ್ತಿವೆ.
– ಕಟಾವಿಗೆ ಬಂದಿದ್ದ ಭತ್ತದ ಬೆಳೆ ಕಾಡಾನೆ ಹಾವಳಿಗೆ ಸಂಪೂರ್ಣ ನಾಶ.
– ಡ್ರೋನ್ ಕ್ಯಾಮೆರಾ ಕಣ್ಣಿಗೂ ಕಾಣಿಸದ ಆನೆಗಳು.
ಇದು ನನ್ನ ತವರೂರಿನ ಸದ್ಯದ ವಿದ್ಯಮಾನ.ಹೆತ್ತೂರು ಹೋಬಳಿ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹೊಸಹಳ್ಳಿ ,ಹಿರಿದನಹಳ್ಳಿ, ಮರ್ಕ್ ಹಳ್ಳಿ,, ಕರಡಿಗಾಲ ಹಾಗೂ ಜೇಡಿಗದ್ದೆ – ಈ ಗ್ರಾಮಗಳ ಜನರು ಬೆಳೆದಂತಹ ಕಾಫಿ,ಗದ್ದೆ ಪ್ರತಿದಿನ ನಷ್ಟ ಅನುಭವಿಸುತ್ತಿದ್ದಾರೆ. ಈ ಭಾಗದ ಜನರು ಬಹುತೇಕರು ಸಣ್ಣ ಹಿಡುವಳಿದಾರರು.ಬೆಳ್ಳಗೆಯಿಂದ ಸಾಯಂಕಾಲ ತನಕ ಕಷ್ಟಪಟ್ಟು ತಾವೇ ಸ್ವತಃ ದುಡಿದು ನಿದ್ರೆ ಮಾಡೋ ಟೈಮ್ ನಲ್ಲಿ ಆನೆ ಕಾಯೋ ಪರಿಸ್ಥಿತಿ ತಲೆದೂಗಿರುವುದು ದುರದಷ್ಟಕರ.
ಗಜರಾಜ – ನಿನ್ನನ್ನು ನೋಡಿ ಹೆದರಲ್ಲ ಅಂದೋರೆಲ್ಲ
ನಿನ್ನ ಹೆಸರು ಕೇಳಿ ಬೆವಥೂ ಬಿಟ್ಟಿದ್ದಾರೆ.
ಈಗ ಸದ್ಯಕ್ಕೆ ಅತಿಹೆಚ್ಚು ಆನೆಗಳನ್ನು ಹೊಂದಿರುವ ಜಿಲ್ಲೆ ನಮ್ಮದು.ಅದರಲ್ಲೂ ಸಕಲೇಶಪುರ ತಾಲ್ಲೂಕು.ಗದ್ದೆಯಲ್ಲಿ,ತೋಟದಲ್ಲಿ,ಪಟ್ಟ ಣದಲ್ಲೂ ಅಷ್ಟೇ ಯಾಕೆ ನೆನ್ನೆ ರಾಷ್ಟ್ರೀಯ ಹೆದ್ದಾರಿ NH – ೭೫ ನಲ್ಲೂ ಆನೆ ಹಾದುಹೋಗಿದ್ದು ಸುದ್ದಿಯಾಯಿತು.ಆದರೆ ಈಗ ಗದ್ದೆ ಕೆಲಸವಿರಲಿ – ತೋಟದ ಕೆಲಸವಿರಲಿ ಗಜರಾಯ ಸಮಯ ನಿಗದಿಪಡಿಸಿದ್ದಾನೆ. ಬೆಳಗ್ಗೆ ಒಂಬತ್ತು ಗಂಟೆಯೊಳಗೆ ಯಾರು ತೋಟ ಗದ್ದೆಗೆ ಹೋಗುವಂತಿಲ್ಲ. ಮತ್ತೆ ಸಂಜೆ ನಾಲ್ಕರ ಮೇಲೆ ಜಮೀನಿನಲ್ಲಿ ಕೆಲಸ ಮಾಡುವಂತಿಲ್ಲ. ಆ ನಿಗದಿತ ಸಮಯದಲ್ಲಿ ತೋಟ ದಲ್ಲಿದ್ದೀರೆಂದರೆ ಯಾವ ಕ್ಷಣದಲ್ಲಾದರೂ ಜೀವಕ್ಕೆ ಅಪಾಯ ಒದಗಬಹುದು. ಅಷ್ಟರ ಮಟ್ಟಿಗೆ ಮಲೆನಾಡಿನಲ್ಲಿ ಗಾಜರಾಯ ಅಘೋಷಿತ ಕರ್ಫ್ಯೂ ಹಾಕಿದ್ದಾನೆ.ತೋಟ ಗದ್ದೆಗಳಲ್ಲಿ ಯಾವುದೇ ಭಯವಿಲ್ಲದೆ ಕೆಲಸ ಮಾಡುತ್ತಿದ್ದ ರೈತರು,ಕಾರ್ಮಿಕರು ತೋಟದಲ್ಲಿ ಆಗಾಗ ಸುತ್ತಾ ನೋಡುತ್ತಾ ಬಹಳ ಎಚ್ಚರಿಕೆಯಿಂದ ಕೆಲಸ ಮಾಡುವ ಪ್ರಮೇಯ ಬಂದಿದೆ. ಗಾಳಿಗೆ ಕೊಂಬೆ ಬಿದ್ದರೂ ಗಜರಾಯನ ನೆನಪಾಗಿ ಜಂಘಾಬಲವೇ ಉಡುಗಿ ಅಲ್ಲಿಂದ ಕಾಲ್ಗಿತ್ತ ಉದಾಹರಣೆಗಳು ಇವೆ. ಈ ಎರಡು ತಿಂಗಳಲ್ಲಿ ಸಕಲೇಶಪುರ ತಾಲೂಕಿನಲ್ಲಿ ನಾಲ್ಕು ಜನರು ಜೀವ ಕಳೆದುಕೊಂಡಿದ್ದಾರೆ .ಅಪರೂಪವಾಗಿದ್ದ ಮಾನವ ಜೀವ ಹಾನಿ ಮಾಮೂಲಿ ಯಾಗುತ್ತಿರುವುದು ಇಲ್ಲಿನ ಜನರ ಆತಂಕಕ್ಕೆ ಕಾರಣವಾಗಿದೆ.
ಎರಡು ದಶಕಗಳಿಂದ ಶಾಶ್ವತ ಪರಿಹಾರ ಕಲ್ಪಿಸಿ ಕೊಡದಿರುವ ಸರಕಾರಗಳು ಹಾಗೂ ಅರಣ್ಯ ಇಲಾಖೆಯ ಕಾರ್ಯವೈಖರಿ ನೋಡಿ ರೈತರ ರೋಸಿ ಹೋಗಿದ್ದಾರೆ .l
ಈಗ ಟಾಸ್ಕ್ ಪೋರ್ಸ ಕೆಲಸ.ಆನೆಗಳ ಸಮಸ್ಯೆ ಸಂಪೂರ್ಣ ಪರಿಹಾರ ಮಾಡಲು ಟಾಸ್ಕ್ ಫೋರ್ಸ್ ನಿಂದ ಸಾಧ್ಯವಿದೆಯೇ?ಗಾರ್ಡ್ಗಳನ್ನು ಸರಕಾರ ಈಗಾಗಲೇ ನೇಮಕ ಮಾಡಿತ್ತು.ಅದು ಹೊಸ ವಿಚಾರವಲ್ಲ.ಈಗ ಫೋನ್ ನಂಬರ್ ಒಂದು ಹೊಸದಾಗಿ ಇಟ್ಟಿದ್ದಾರೆ.ಇದು ಸಂತಸಪಡುವ ವಿಷಯವೂ ಅಲ್ಲ.ಗುಂಪಿನಲ್ಲಿ ಬರುವ ೧o – ೧೫ ಆನೆಗಳನ್ನು ಟಾಸ್ಕ್ ಫೋರ್ಸ್ ನಿoದ ನಿಲ್ಲಿಸಲು ಸಾಧ್ಯವೇ?? ಅವರಿಂದ ಆನೆ ಓಡಿಸಲು ಆಗುತ್ತದೆಯೇ ???
ಗುಂಪಿನಲ್ಲಿ ಬದುಕುವುದು ಕುರಿಯಂತ ಮುಗ್ಧ ಪ್ರಾಣಿಗಳು ಮಾತ್ರವಲ್ಲ ; ಆನೆಯಂತ ಬಲಶಾಲಿ ಪ್ರಾಣಿಗಳು ಸಹ ಗುಂಪಲ್ಲಿ ಬಾಳುತ್ತವೆ.
ಕೆಲವು ಒಂಟಿ ಸಲಗಗಳನ್ನು ಬಿಟ್ಟರೆ ಬಹುತೇಕ ಆನೆಗಳು ಗುಂಪಾಗಿಯೇ ಬದುಕುವುದು.ಆಹಾರ ಅರಸುವಾಗ ,ನೀರು ಕುಡಿಯುವಾಗ ,ರಾತ್ರಿ ವೇಳೆ ಕಂದಕ , ಬೇಲಿ ದಾಟಿ ಜಮೀನುಗಳಿಗೆ ಹೋಗುವಾಗ ,ಕೆಲವೊಮ್ಮೆ ದಾರಿ ತಪ್ಪಿ ಊರಿಗೆ ನುಗ್ಗುವಾಗ ,ಅಲ್ಲಿಂದ ತಪ್ಪಸಿಕೊಂಡು ಬರುವಾಗ , ಹಾಗೇ ವಾರ್ಷಿಕವಾಗಿ ನೀರು , ಆಹಾರಕ್ಕಾಗಿ ವಲಸೆ ಹೋಗುವಾಗ …..ಹೀಗೆ ಸಂದರ್ಭ ಯಾವುದೇ ಇರಲಿ ಇವು ಗುಂಪು ಬಿಟ್ಟು ಕದಲುವುದಿಲ್ಲ.
ಹೀಗಾಗಿ ಟಾಸ್ಕ್ ಫೋರ್ಸ್ ಒಂದು ಅವೈಜ್ಞಾನಿಕ ಯೋಜನೆಯಾದೀತು.ಕಾಡಾನೆ ವಿಚಾರದಲ್ಲಿ ಅದನ್ನು ಪರಿಹರಿಸುವಲ್ಲಿ ಸರಕಾರಕ್ಕೆ ಆಗಲಿ , ಅಧಿಕಾರಿಗಳಿ ಗಾಗಲಿ ಸ್ಪಷ್ಟ ನಿರ್ಧಾರವಿಲ್ಲ.ಇವರು ನಮ್ಮ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ.ಶಾಸಕರು ,ಸಂಸದರು ಸರಕಾರದ ಮೇಲೆ ಒತ್ತಡ ತರಲು ವಿಫಲವಾಗಿರುವ ಹೊಣೆಯನ್ನು ಹೊರಬೇಕಾಗಿದೆ.ಸರಕಾರ ಒಂದು ಭಾಗ.ಹಾಗೆಯೇ ಸಂಸತ್ ಅಧಿವೇಶನದಲ್ಲಿ ನಮ್ಮ ಸಂಸದರು ಈ ಭಾಗದ ರೈತರ ಅಭಿಪ್ರಾಯ ಆಲಿಸಿ ಮಾತನಾಡಬೇಕು. ಬರೀ ಪ್ರಶ್ನೆ ಮಾಡಿದರೆ ಅಲ್ಲಿ ದೊರಕುವುದು ಕಾಗದದಲ್ಲಿ ಉತ್ತರ ಅಷ್ಟೇ.ಇಂದು ನನ್ನ ಊರಿನ ಜನರು ಜೀವದ ಹಂಗು ತೊರೆದು ಬದುಕು ನಡೆಸುತ್ತಿದ್ದಾರೆ.ಟಾಸ್ಕ್ ಫೋರ್ಸ್ ನಿಂದ ಸರಕಾರ ವಾಹನ ಒದಗಿಸಿದ್ದು ಬಿಟ್ಟು ಬೇರೆ ಯಾವುದೇ ಹೊಸ ಚಿಂತನೆ ಅರಣ್ಯ ಟಾಸ್ಕ್ ಫೋರ್ಸ್ ಗೆ ನೀಡದಿರುವುದು ರೈತರಿಗೆ ವಂಚನೆ ಮಾಡಿದಂತೆ.ಇದರ ಜೊತೆಗೆ ಆನೆ ಹಾವಳಿಯಿಂದ ಬೆಳೆಹಾನಿ ಸಂಭವಿಸಿದೆ ಎಂದು ತಿಳಿದ ತಕ್ಷಣ ಬಂದು ಅವರೇ ಖುದ್ದಾಗಿ ಭೇಟಿ ನೀಡಿ ಅಲ್ಲೇ ಪರಿಹಾರ ನೀಡಬೇಕು.
ಈಗ ಬೇಕಿರುವುದು ಆನೆಗಳಿಗೆ “ಆಹಾರ ಭದ್ರತೆ ” ಹಾಗೂ ರೈತರಿಗೆ “ಕೃಷಿ ಭದ್ರತೆ”.ಆನೆಗಳ ಸಂಖ್ಯೆ ವಿಪರೀತವಾಗಿರೋದು ……ಆನೆಗಳಿಗೆ ಸಾಕಾಗುವಷ್ಟು ಆಹಾರ ಕಾಡಲ್ಲಿರದೇ ಇರೋದು.ಮತ್ತು ಇರುವ ಕಾಡನ್ನು ಆಕ್ರಮಿಸಿ ಕೊಳ್ಳುತ್ತಿರುವ ಲಾಂಟನಾ ಗಿಡ.ಜೊತೆಗೆ ಬಿದಿರಿಗೆ ಕಟ್ಟೆ ಬಂದಿದ್ದು,ಅದಕ್ಕೂ ಸರಿಯಾಗಿ ತೇಗದ ಏಕ ಜಾತಿಯ ನೆಡುತೋಪು ಗಳಿಂದಾಗಿ ಆಹಾರದ ಕೊರತೆ ಆನೆಗಳು ಕಾಡು ಬಿಟ್ಟು ತೋಟಗಳಿಗೆ ನುಗ್ಗುತ್ತಿರುವ ಕಾರಣ.ತೋಟದಲ್ಲಿ ದೊರಕುತ್ತಿರುವ ಪ್ರೊಟೀನ್ ಭರಿತ ಆಹಾರಗಳು…..ಪಪ್ಪಾಯ,ಬಾಳೆ ,ಕಿತ್ತಳೆ, ಬೈನೆ , ಹಲಸು,ಹಾಗೂ ಯಥೇಚ್ಚವಾಗಿ ನೀರು….ಆನೆಗಳು ಕೆಲವು ಪ್ರದೇಶಗಳಿಗೆ ತಮ್ಮ ಸಂಚಾರ ಸೀಮಿತ ಗೊಳಿಸಿಕೊಂಡಿದ್ದಾವೆ.ಜೊತೆಗೆ ಈ ಭಾಗದಲ್ಲಿ ಅಡಗಲು ಮತ್ತು ಓಡಾಡಲು ಬಿಸಲೇ ಘಾಟ್, ಪಾಟ್ಲ ಬೆಟ್ಟದ ಜೊತೆಗೆ ಪಶ್ಚಿಮಘಟ್ಟ ಗಳಂತಹ ಪ್ರದೇಶಗಳು , ಇದಕ್ಕೆ ಕೊಂಡಿಯಂತಿರುವ ಕೊಡಗು ಜಿಲ್ಲೆ.ಆದರಿಂದ ಸರಕಾರ ಮುಂದೆ ಪ್ರವೇಶಿಸಿ ಆನೆಗಳಿಗೆ ಸಾಕಾಗುವಷ್ಟು ಆಹಾರ ಒದಗಿಸಬೇಕು.ಆಗ ರೈತರಿಗೆ” ಕೃಷಿ ಭದ್ರತೆ” ದೊರೆಯುತ್ತದೆ.