ಸಕಲೇಶಪುರ: ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಬೇಸರ ವ್ಯಕ್ತಪಡಿಸಿದ ಬಿ. ಎಂ ಶಿವಕುಮಾರ್
ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲು ನಿರ್ಧಾರ.
ಸಕಲೇಶಪುರ : ತಾಲೂಕಿನ ಜೆಡಿಎಸ್ ಹಿರಿಯ ನಾಯಕ ಬಾಳ್ಳುಪೇಟೆಯ ಬಿ. ಎಂ ಶಿವಕುಮಾರ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ.
ಸುಮಾರು 46 ವರ್ಷಗಳಿಂದ ಜೆಡಿಎಸ್ ಪಕ್ಷ ಹಾಗೂ ದೇವೇಗೌಡರ ಕುಟುಂಬದ ಜೊತೆ ಬಾಂಧವ್ಯ ಹೊಂದಿದ್ದರು. ಆದರೆ ಇದೀಗ ಶಿವಕುಮಾರ್ ರವರು ಜೆಡಿಎಸ್ ಪಕ್ಷದ ಕುಟುಂಬ ರಾಜಕಾರಣದಿಂದ ಬೇಸತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಬೆಂಬಲಕ್ಕೆ ನಿಲ್ಲಲು ಮುಂದಾಗಿದ್ದಾರೆ.
ಗುರುವಾರ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಶಿವಕುಮಾರ್ ಭಾಗವಹಿಸುವದೊಂದಿಗೆ ಜೆಡಿಎಸ್ ಗೆ ಸಡ್ಡು ಹೊಡೆದು ನಿಂತಿದ್ದಾರೆ.
ಜೆಡಿಎಸ್ ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷ ಸ್ಥಾನವನ್ನು ನಿರ್ವಹಿಸಿದ್ದ ಶಿವಕುಮಾರ್ ಅವರು ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಬೇಸರ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಪಕ್ಷದಲ್ಲಿ ಕೇವಲ ಅವರ ಕುಟುಂಬ ಸದಸ್ಯರಿಗೆ ಮಣೆ ಹಾಕುವುದದಾರೆ ಕಾರ್ಯಕರ್ತರ ಗತಿಯೇನು, ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಗೌರವ ಇಲ್ಲದಂತಾಗಿದೆ, ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ರೇವಣ್ಣ ತಮ್ಮ ಪುತ್ರನಿಗೆ ನೀಡಿದ್ದಾರೆ. ಸೂರಜ್ ವೈದ್ಯರು,ವೈದ್ಯರಾಗಿ ಸಮಾಜಕ್ಕೆ ಸಾಕಷ್ಟು ಸೇವೆ ಮಾಡಬಹುದಿತ್ತು ಆದರೆ ರೇವಣ್ಣನವರಿಗೆ ಪುತ್ರವ್ಯಾಮೋಹ ಜಾಸ್ತಿ ಹಾಗಾಗಿ ಪರಿಷತ್ ಸದಸ್ಯರನ್ನಾಗಿ ಮಾಡಿದರು. ಇದೀಗ ಲೋಕಸಭಾ ಚುನಾವಣೆಯಲ್ಲಿ ತಮ್ಮ ಈ ದಿನ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುತ್ತಿದ್ದಾರೆ, ಹಾಸನಕ್ಕೆ ಪ್ರಜ್ವಲ್ ರೇವಣ್ಣ, ಮಂಡ್ಯಕ್ಕೆ ನಿಖಿಲ್ ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರಕ್ಕೆ ಅವರ ಅಳಿಯ ಮಂಜುನಾಥ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವುದರೊಂದಿಗೆ ಮತ್ತೊಮ್ಮೆ ಕುಟುಂಬ ರಾಜಕಾರಣಕ್ಕೆ ಮುನ್ನಡಿ ಬರೆಯುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ಜೆಡಿಎಸ್ ಪಕ್ಷದಲ್ಲಿ ನನಗೆ ರಾಜ್ಯ ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಹುದ್ದೆ ನೀಡಿದ್ದರು ಕಳೆದ 8-10 ವರ್ಷದಲ್ಲಿ ಮೂರು ಸಭೆಗೆ ಮಾತ್ರ ಆಹ್ವಾನ ನೀಡಿದ್ದಾರೆ ಅದು ಚುನಾವಣೆ ಸಮಯದಲ್ಲಿ ಮಾತ್ರ ಹಾಗಾಗಿ ಪಕ್ಷದ ಮುಖಂಡರ ನೆಡೆಗೆ ಬೇಸವಾಗಿ ಈ ಬಾರಿ ಪುಟ್ಟಸ್ವಾಮಿ ಗೌಡರ ಮೊಮ್ಮಗ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಬೆಂಬಲಿಸುತ್ತಿರುವುದಾಗಿ ವಾಸ್ತವ ನ್ಯೂಸ್ ಗೆ ತಿಳಿಸಿದ್ದಾರೆ.
ನೆನ್ನೆ ಕಾಂಗ್ರೆಸ್ ಸಭೆ ಮುಗಿದ ಬಳಿಕ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಬಾಳ್ಳುಪೇಟೆಯಲ್ಲಿರುವ ಶಿವಕುಮಾರ್ ಮನೆಗೆ ಭೇಟಿ ನೀಡಿ ಮಾತುಕತೆ ನೆಡೆಸಿದರು.
ಜೆಡಿಎಸ್ ಪಕ್ಷದ ಮುಖಂಡರ ಅಸಮಾಧಾನ ಹಾಗೂ ಬಿಜೆಪಿ ಪಕ್ಷದ ಅಸಹಕಾರದಿಂದ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮೇಲೆ ಚುನಾವಣೆಯಲ್ಲಿ ವ್ಯತಿರಿಕ್ತಾ ಪರಿಣಾಮ ಬೀರಿದರೆ ಅಚ್ಚರಿಪಡಬೇಕಾಗಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.