ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಿ :ಶಾಸಕ ಸಿಮೆಂಟ್ ಮಂಜುನಾಥ್
ಬಾಳ್ಳುಪೇಟೆಯ ಯುರೋ ಕಿಡ್ಸ್ ಶಾಲೆಯಲ್ಲಿ ವಾರ್ಷಿಕೋತ್ಸವ
ಸಕಲೇಶಪುರ : ಮಕ್ಕಳಿಗೆ ಆಸ್ತಿ ಮಾಡದೆ,ಅವರಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರ, ಬದುಕು ಕಲಿಸಿಕೊಡುವ ಮೂಲಕ ಸಮಾಜಕ್ಕೆ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಶಾಸಕ ಸಿಮೆಂಟ್ ಮಂಜುನಾಥ್ ಹೇಳಿದರು.
ಗುರುವಾರ ತಾಲೂಕಿನ ಬಾಳ್ಳುಪೇಟೆಯಲ್ಲಿರುವ ಯುರೋ ಕಿಡ್ಸ್ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು.
ಪ್ರತಿಯೊಂದು ಮನೆಯಲ್ಲಿಯು ಪೋಷಕರು ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಬೇಕು ಹಾಗೂ ಮಕ್ಕಳು ಯಾವುದರ ಬಗ್ಗೆ ಆಸಕ್ತಿ ಹೊಂದಿದ್ದಾರೆಂದು ತಿಳಿದುಕೊಂಡು ಮಕ್ಕಳಿಗೆ ಯಾವುದರ ಬಗ್ಗೆ ಅಸಕ್ತಿ ಇದೆ ಅದನ್ನು ಪ್ರೊತ್ಸಾಹಿಸಿದರೆ ಮಕ್ಕಳು ರಾಷ್ಟ್ರದ ಆಸ್ತಿಯಾಗುತ್ತಾರೆ, ಸಮಾಜಘಾತುಕ ವ್ಯಕ್ತಿ ಯಾಗುವುದಿಲ್ಲ. ಇದು ಅವರ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.
ಕೆಪಿಸಿಸಿ ಸದಸ್ಯ ಯಡೇಹಳ್ಳಿ ಮಂಜುನಾಥ್ ಮಾತನಾಡಿ,ಗ್ರಾಮೀಣ ಭಾಗದಲ್ಲಿನ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಜನಸಾಮಾನ್ಯರ ಬದುಕಿಗೆ ಬೆಳಕಾಗಬೇಕಾಗಿದೆ ಎಂದರು.ಮಕ್ಕಳಿಗೆ ಶಿಕ್ಷಣ ಕಲಿಸುವ ಜವಾಬ್ದಾರಿ ಕೇವಲ ಶಿಕ್ಷಕರದ್ದಲ್ಲ. ಮನೆ ಹಾಗೂ ಸಮಾಜದಲ್ಲಿ ಪೋಷಕರ ಹೊಣೆಗಾರಿಕೆಯೂ ಆಗಿದೆ. ಕಾಲಕಾಲಕ್ಕೆ ತಕ್ಕಂತೆ ಮಕ್ಕಳಲ್ಲಿನ ಕಲಿಕಾ ದಾಹಕ್ಕೆ ಅನುಗುಣವಾಗಿ ಕಲಿಸುವ ಪ್ರಯತ್ನ ಶಾಲೆಯಲ್ಲಿ ಶಿಕ್ಷಕರಿಂದ ನಡೆಯುತ್ತದೆ. ಇದಕ್ಕೆ ಪೂರಕವಾಗಿ ಪೋಷಕರು ಪ್ರೇರಣೆ ನೀಡಬೇಕಿದೆ ಎಂದು ಸಲಹೆ ನೀಡಿದರು.ಮಕ್ಕಳಿಗೆ ಪೋಷಕರು ಉನ್ನತ ಶಿಕ್ಷಣ ಕೊಡಿಸುವ ಗುರಿ ಹೊಂದಿರುವುದು ಹೆಚ್ಚು ಅರ್ಥಪೂರ್ಣವಾಗಿದ್ದರೂ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಬೇಕಿದೆ, ಹೀಗಾದಾಗ ಮಾತ್ರ ಮಕ್ಕಳು ಪಡೆದ ಶಿಕ್ಷಣಕ್ಕೆ ಹೆಚ್ಚಿನ ಸಾರ್ಥಕತೆ ದೊರೆಯುತ್ತದೆ ಎಂದರು.
ಶಾಲಾ ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ರಘು ಮಾತನಾಡಿ ಮಕ್ಕಳಲ್ಲಿ ಸುಪ್ತ ಪ್ರತಿಭೆ ಇರುತ್ತದೆ, ಆ ಪ್ರತಿಭೆಯನ್ನು ಗುರುತಿಸಲು ಪ್ರತಿವರ್ಷದಂತೆ ಈ ವರ್ಷವು ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸಿದ್ದು ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಇಂದು ಅವರ ಪ್ರತಿಭೆಯನ್ನು ಗುರುತಿಸುವ ದಿನವಾಗಿದೆ ಎಂದರು.
ಇದೇ ವೇಳೆ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದರು. ಶೈಕ್ಷಣಿಕ ಸಾಲಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ರೀಡಾಕೂಟಗಳಲ್ಲಿ ಜಯ ಗಳಿಸಿದ ಪೋಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಬಹುಮಾನ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೌರಮ್ಮ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್,ಸಮಾಜ ಸೇವಕರಾದ ಬಾಳ್ಳು ಮಲ್ಲಿಕಾರ್ಜುನ್,ಕರವೇ ತಾಲೂಕು ಅಧ್ಯಕ್ಷ ಆರ್.ಎಸ್ ದಿನೇಶ್,ಬಿ.ಸಿದ್ದಣ್ಣಯ್ಯ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಓಂಕಾರ ಮೂರ್ತಿ, ಮುಖಂಡರಾದ ಚಂದ್ರಶೇಖರ್,ಶಿವಕುಮಾರ್ ಮೆಣಸಮಕ್ಕಿ, ಅಜಿತ್, ಕಿಶೋರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.