ಆಡಳಿತ ಭಾಷೆಯಾಗಿ ಕನ್ನಡವನ್ನು ಸಂಪೂರ್ಣವಾಗಿ ಜಾರಿಗೆ ತರಲು ಸರ್ಕಾರ ಕಟಿಬದ್ಧವಾಗಿದೆ. ಮುಖ್ಯಮಂತ್ರಿಯವರು ಕೂಡ ಇಚ್ಛಾಶಕ್ತಿ ಪ್ರದರ್ಶಿಸುವ ಭಾಗವಾಗಿಯೇ ವಿಧೇಯಕದ ಪರವಾಗಿದ್ದಾರೆ. ಒಮ್ಮೆ ವಿಧೇಯಕ ಒಪ್ಪಿಗೆ ಪಡೆದಲ್ಲಿ ಅದು ಕಾನೂನು ಆಗಲಿದೆ. ಆಗ ಎಲ್ಲ್ಲ ಹಂತಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಜಾರಿಗೊಳಿಸಲು ಅಸ್ತ್ರ ಸಿಗಲಿದೆ. ದಂಡನೆಗೂ ಅವಕಾಶ ಇರುವುದರಿಂದ ಯಾರೂ ಕಾನೂನು ವಿರುದ್ಧ ಹೋಗಲಾರರು ಎಂಬ ಭರವಸೆ ಇದೆ. ಕೇಂದ್ರೀಯ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲು ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಕನ್ನಡಿಗರ ನೇಮಕಕ್ಕೂ ಅವಕಾಶ ಸಿಗಲಿದೆ. ನ್ಯಾಯಾಲಯಗಳಲ್ಲೂ ಕನ್ನಡ ಬಳಕೆಗೆ ಪ್ರಯತ್ನಿಸಿ ಸಫಲರಾಗಲಿದ್ದೇವೆ ಎಂದು ಸಚಿವ ಸುನೀಲ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಆಡಳಿತದ ಎಲ್ಲಾ ಹಂತಗಳಲ್ಲೂ ಕನ್ನಡ ಅನುಷ್ಠಾನ ಸೇರಿದಂತೆ ನಾಡು-ನುಡಿ ವಿಚಾರದಲ್ಲಿ ಕನ್ನಡಿಗರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಉದ್ದೇಶಿತ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವು ಪರಿಹಾರ ಒದಗಿಸಲಿದೆ ಎಂದು ಕನ್ನಡ-ಸಂಸ್ಕೃತಿ ಸಚಿವ ವಿ.ಸುನೀಲ್ಕುಮಾರ್ ತಿಳಿಸಿದರು. ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ‘ವಿಜಯವಾಣಿ’ ಕಚೇರಿಯಲ್ಲಿ ನಡೆದ ಸಂವಾದದಲ್ಲಿ, ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ವಿಧೇಯಕಕ್ಕೆ ಒಪ್ಪಿಗೆ ಸಿಗಲಿದೆ. ಇದರ ಬೆನ್ನಲ್ಲೇ ವಿಧೇಯಕ ಜಾರಿಗೆ ಅನುಷ್ಠಾನ ಸಮಿತಿ ರಚಿಸಲಾಗುವುದು ಎಂದು ಸ್ಪಷ್ಟ ಭರವಸೆ ನೀಡಿದರು. ರಾಜ್ಯ ಸರ್ಕಾರ ವಿಧೇಯಕವನ್ನು ಈಗಾಗಲೇ ಅಧಿವೇಶನದಲ್ಲಿ ಮಂಡಿಸಿ ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಕನ್ನಡಪರ ಸಂಘ ಸಂಸ್ಥೆಗಳು ಹಾಗೂ ಎಲ್ಲ ಕನ್ನಡಿಗರು ಸೂಚಿಸುವ ಸಕಾರಾತ್ಮಕ ಅಂಶಗಳನ್ನು ತಿದ್ದುಪಡಿ ರೂಪದಲ್ಲಿ ವಿಧೇಯಕದಲ್ಲಿ ಸೇರ್ಪಡೆ ಮಾಡಲಾಗುವುದು. ಕನ್ನಡ ಸಾಹಿತ್ಯ ಪರಿಷತ್ ಸಲ್ಲಿಸಿರುವ ಶಿಫಾರಸುಗಳನ್ನೂ ಪರಿಗಣಿಸಲಾಗುವುದು ಎಂದರು