ಸಕಲೇಶಪುರ: ಪಟ್ಟಣ ವ್ಯಾಪ್ತಿಯ ಜನರ ಆರೋಗ್ಯ ಸೇವೆಗಾಗಿ ನಮ್ಮ ಕ್ಲಿನಿಕ್ ಕಾರ್ಯನಿರ್ವಹಿಸಲಿದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಅರೇಹಳ್ಳಿ ರಸ್ತೆಯಲ್ಲಿ ನೂತನವಾಗಿ ಕಾರ್ಯನಿರ್ವಹಿಸಲಿರುವ ನಮ್ಮ ಕ್ಲಿನಿಕ್ ಗೆ ಮೌಸ್ ಕ್ಲಿಕ್ ಮಾಡುವ ಮುಖಾಂತರ ಉದ್ಘಾಟಿಸಿ ಮಾತನಾಡಿ ರಾಜ್ಯ ಸರ್ಕಾರ ರಾಜ್ಯದೆಲ್ಲೆಡೆ ಸುಮಾರು 438 ಕ್ಲಿನಿಕ್ ಗಳನ್ನು ಜನರ ಅನುಕೂಲಕ್ಕಾಗಿ ಪ್ರಾರಂಭ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಪಟ್ಟಣದ ಅರೇಹಳ್ಳಿ ರಸ್ತೆಯಲ್ಲಿ ನಮ್ಮ ಕ್ಲಿನಿಕ್ ಕಾರ್ಯನಿರ್ವಹಿಸಲಿದೆ. ಜಿಲ್ಲೆ ಹಾಗೂ ರಾಜ್ಯದಲ್ಲೆ ಸಕಲೇಶಪುರದ ನಮ್ಮ ಕ್ಲಿನಿಕ್ ಕಟ್ಟಡ ಮಾದರಿಯಾಗಿದೆ. ಈ ಕ್ಲಿನಿಕ್ಗಳಿಂದ ದುರ್ಬಲ ವರ್ಗದವರಿಗೆ, ಶ್ರಮಿಕರಿಗೆ, ಕೂಲಿ ಕಾರ್ಮಿಕರಿಗೆ ಸೇರಿದಂತೆ ಹಲವರಿಗೆ ಆರೋಗ್ಯ ಸೇವೆ ಸಿಗಲಿದೆ ಇದನ್ನು ಎಲ್ಲಾರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ಮಹೇಶ್ ಮಾತನಾಡಿ ನಮ್ಮ ಕ್ಲಿನಿಕ್ಗಳಲ್ಲಿ 12 ರೀತಿಯ ಆರೋಗ್ಯ ಸೇವೆಗಳು ಲಭ್ಯ ಇರಲಿದೆ. ತಲಾ ಒಬ್ಬ ವೈದ್ಯಾಧಿಕಾರಿ, ನರ್ಸಿಂಗ್ ಸ್ಟಾಫ್, ಲ್ಯಾಬ್ ಟೆಕ್ನಿಷಿಯನ್, ಡಿ ದರ್ಜೆ ನೌಕರರು ಇಲ್ಲಿ ಇರಲಿದ್ದಾರೆ. ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಶಿಶುವಿನ ಸಮಗ್ರ ಆರೈಕೆ, ಬಾಲ್ಯ ಮತ್ತು ಹದಿಹರಯದವರಿಗೆ ಸೇವೆಗಳು, ಸಾರ್ವತ್ರಿಕ ಲಸಿಕಾಕರಣದ ಸೇವೆಗಳು, ಕುಟುಂಬ ಕಲ್ಯಾಣ ಗರ್ಭ ನಿರೋಧಕ ಸೇವೆಗಳು, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಕಾಯಿಲೆಗಳಿಗೆ ಸೇವೆ, ಮಧುಮೇಹ, ರಕ್ತದೊತ್ತಡಕ್ಕೆ ಚಿಕಿತ್ಸೆ , ಸಕ್ಕರೆ ಕಾಯಿಲೆ, ದೀರ್ಘಾವಧಿ ಕಾಯಿಲೆಗಳು, ಬಾಯಿ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್, ಬಾಯಿಯ ಆರೋಗ್ಯ ಸಮಸ್ಯೆಗಳು ಮತ್ತು ಸೇವೆಗಳು, ಕಣ್ಣಿನ ತಪಾಸಣೆ, ಮೆಂಟಲ್ ಹೆಲ್ತ್ಗೆ ಸಂಬಂಧಿಸಿದ ಮೂಲಭೂತ ಸೇವೆಗಳು ಸೇರಿದಂತೆ ಬೇರೆ ಆಸ್ಪತ್ರೆಗಳಿಗೆ ರೆಫರಲ್ ಸೇವೆಗಳು ಇಲ್ಲಿ ಲಭ್ಯವಾಗಲಿದೆ ಎಂದರು.ವೃ ಸೋಮವಾರದಿಂದ ಶನಿವಾರ ತನಕ ಬೆಳಗ್ಗೆ 9 ರಿಂದ ಸಂಜೆ 4.30ರ ತನಕ ಈ ಸೇವೆ ಲಭ್ಯವಿದ್ದು ಭಾನುವಾರ ರಜೆ ಇರಲಿದೆ. ಬಡಾವಣೆಯ ವ್ಯಾಪ್ತಿಯಲ್ಲಿ ಈ ಕ್ಲಿನಿಕ್ ಗಳು ಎತ್ತುವುದರಿಂದ ಸುಲಭವಾಗಿ ಆರೋಗ್ಯ ಸೇವೆ ಸಿಗಲಿದೆ ಎಂದರು.
ಈ ಸಂಧರ್ಭದಲ್ಲಿ ತಹಸೀಲ್ದಾರ್ ಮೇಘನಾ, ಪುರಸಭಾ ಅಧ್ಯಕ್ಷ ಕಾಡಪ್ಪ, ಉಪಾಧ್ಯಕ್ಷೆ ವಿದ್ಯಾ ಪಿ ಶೆಟ್ಟಿ,ಕ್ರಾಫರ್ಡ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸರುಣ್, ಪುರಸಭಾ ಸದಸ್ಯರಾದ ಉಮೇಶ್, ವನಜಾಕ್ಷಿ, ನಾಮನಿರ್ದೇಶಿತ ಸದಸ್ಯೆ ಚೇತನಾ, ವೈದ್ಯೆ ನೂತನ, ಆರೋಗ್ಯ ಇಲಾಖೆಯ ರಾಣಿ, ಮಳಲಿ ಗ್ರಾ.ಪಂ ಅಧ್ಯಕ್ಷ ಸತೀಶ್ ಶೆಟ್ಟಿ ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.