ಸಕಲೇಶಪುರ: ಹೊಟ್ಟೆಪಾಡಿಗಾಗಿ ಕ್ಷೇತ್ರಕ್ಕೆ ಬಂದಿರುವರು ಕ್ಷೇತ್ರದ ಮೂಲನಿವಾಸಿಗಳಾಗಲು ಸಾಧ್ಯವಿಲ್ಲ ಎಂದು ಹೂಡಾ ಮಾಜಿ ಅಧ್ಯಕ್ಷ ಕೃಷ್ಣಕುಮಾರ್ ಹೇಳಿಕೆ ನೀಡಿದ್ದಾರೆ.
ಮೂಲನಿವಾಸಿಗಳು ಹಾಗೂ ಹೊರಗಿನವರು ಎಂದು ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಎದ್ದಿರುವ ಗೊಂದಲದ ಕುರಿತು ವಾಸ್ತವ ನ್ಯೂಸ್ ನೊಂದಿಗೆ ಪ್ರತಿಕ್ರಿಯಿಸಿ ಚುನಾವಣೆಗಾಗಿಯೆ ಸ್ಫರ್ಧಿಸಲು ಕ್ಷೇತ್ರಕ್ಕೆ ಬಂದವರು ಕ್ಷೇತ್ರದ ಮೂಲನಿವಾಸಿಗಳಾಗಲು ಸಾಧ್ಯವಿಲ್ಲ. ಹೊಟ್ಟೆಪಾಡಿಗಾಗಿಯೋ, ಅಧಿಕಾರಕ್ಕಾಗಿಯೋ ಮತ್ತೊಂದರ ಆಸೆಗಾಗಿ ಕ್ಷೇತ್ರಕ್ಕೆ ಬಂದವರನ್ನು ಇಲ್ಲಿನ ಮೂಲನಿವಾಸಿಗಳು ಒಪ್ಪುವುದಿಲ್ಲ. ಕಳೆದ ಬಾರಿ ಡಿ.ಕೆ ಸುರೇಶ್ ರವರ ಮನವಿ ಮೇರೆಗೆ ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಹಿರಿಯ ಅಧಿಕಾರಿಯಿಂದ ಕ್ಷೇತ್ರದ ಅಭಿವೃದ್ದಿಯಾಗುತ್ತದೆಂದು ನಿವೃತ್ತ ಐ.ಎ.ಎಸ್ ಸಿದ್ದಯ್ಯನವರಿಗೆ ಅವಕಾಶ ನೀಡಿದ್ದೇವು. ಆದರೆ ಈ ಬಾರಿ ನಾವು ಹೊರಗಿನವರನ್ನು ಕಾಂಗ್ರೆಸ್ ನಿಂದ ಒಪ್ಪುವುದಿಲ್ಲ. ನಾನು ಸಹ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿ ತಳಮಟ್ಟದಿಂದ ಸಂಘಟನೆ ಮಾಡಿದ್ದೇನೆ. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಥಳೀಯವಾಗಿ ನಾಲ್ಕೈದು ಮಂದಿ ಅಕಾಂಕ್ಷಿಗಳಿದ್ದು ಯಾರಿಗೆ ಟಿಕೇಟ್ ನೀಡಿದರು ಸಹ ಒಟ್ಟಾಗಿ ಕೆಲಸ ಮಾಡುತ್ತೇವೆ. ಅದನ್ನು ಬಿಟ್ಟು ಹೊರಗಿನ ಅಭ್ಯರ್ಥಿಗೆ ಮಣೆ ಹಾಕಲು ಮುಂದಾದರೆ ಇದರ ನೇರ ಪರಿಣಾಮವನ್ನು ಕಾಂಗ್ರೆಸ್ ಪಕ್ಷ ಹಾಸನ ಜಿಲ್ಲೆಯಲ್ಲಿ ಮಾತ್ರವಲ್ಲ ಇಡಿ ರಾಜ್ಯದಲ್ಲಿ ಅನುಭವಿಸಬೇಕಾಗುತ್ತದೆ