ಸಕಲೇಶಪುರ: ಯುವಜನರು ನಾಡು ನುಡಿಯ ಬಗ್ಗೆ ಹೆಚ್ಚಿನ ಪ್ರೀತಿ ಹೊಂದಬೇಕೆಂದು ಸಾಹಿತಿ ಯಡೇಹಳ್ಳಿ ಆರ್ ಮಂಜುನಾಥ್ ಹೇಳಿದರು.
ಪಟ್ಟಣದ ಕುಡುಗರಹಳ್ಳಿಯಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ ಜಗತ್ತಿನಲ್ಲಿ ಆರುವರೆ ಸಾವಿರ ಭಾಷೆಗಳಿವೆ. ನಾಲ್ಕುವರೆ ಸಾವಿರ ಭಾಷೆಗಳು ಈಗ ಬಳಕೆಯಲ್ಲಿವೆ,ಜಗತ್ತಿನ ಇಷ್ಟು ಭಾಷೆಗಳಲ್ಲಿ ಕರ್ನಾಟಕ ೧೯ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ ಎಂದರೆ ಕನ್ನಡದ ಇತಿಹಾಸ ಮತ್ತು ಶ್ರೇಷ್ಠತೆ ಬಹಳ ದೊಡ್ಡದಿದೆ.
ಯುವ ಜನರು ಹೆಚ್ಚು ಆಸಕ್ತಿಯಿಂದ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನದಿಂದ ಹೆಚ್ಚು ಹೆಚ್ಚು ಬಳಸಬೇಕು,ಭಾಷೆಯನ್ನ ಹೆಚ್ಚು ಹೆಚ್ಚು ಬಳಸಿದಾಗ ಭಾಷೆ ಸಮೃದ್ಧಗೊಳ್ಳುತ್ತಾ ಬದುಕುಳಿಯುತ್ತದೆ,ಇಲ್ಲವಾದಲ್ಲಿ ಅವಸಾನದ ಕಡೆ ಹೆಜ್ಜೆ ಹಾಕಿರುವ ಕನ್ನಡ ಭಾಷೆ ಒಂದಲ್ಲ ಒಂದು ದಿನ ಸಂಸ್ಕೃತ ಭಾಷೆಯ ರೀತಿ ಅವಸಾನದ ಅಂಚಿಗೆ ತಲುಪಬಹುದು.
ಆಡಳಿತ ನಡೆಸುವ ಸರ್ಕಾರಗಳು ಕನ್ನಡ ನಾಡು ನುಡಿ ಜಲದ ಬಗ್ಗೆ ಬರೀ ಭಾಷಣ ಮಾಡುವುದನ್ನು ಬಿಟ್ಟು, ನಿಮಗೆ ನಿಜವಾದ ಕಾಳಜಿ ಇದ್ದರೆ ಕನ್ನಡದಲ್ಲಿ ಆಡಳಿತದ ಅನುಷ್ಠಾನವನ್ನು ಸಂಪೂರ್ಣ ಕಾರ್ಯಗತ ಗೊಳಿಸಬೇಕು ಎಂದರು.
ನಾವು ನೀವೆಲ್ಲ ಕನ್ನಡದ ಮೊಟ್ಟಮೊದಲ ಶಾಸನ ಹಲ್ಮಿಡಿ ಶಾಸನ ಇರುವಂತ ಜಿಲ್ಲೆಯಲ್ಲಿ ಹುಟ್ಟಿರುವವರು.ಈ ನೆಲದಲ್ಲಿ ಕ್ರಿಸ್ತಶಕ ೪೫೦ ರಲ್ಲಿ ರಚಿತವಾದ ಗದ್ಯ ಶಾಸನ,ಇತಿಹಾಸ,ಭಾಷೆ,ಲಿಪಿ ಸಂಸ್ಕೃತಿ ಮುಂತಾದವುಕ್ಕೆ ಮೊದಲ ಲಿಖಿತ ದಾಖಲೆ.ಬೇಲೂರು ತಾಲೂಕಿನ ಚಿಕ್ಕ ಗ್ರಾಮ ಹಲ್ಮಿಡಿಯಲ್ಲಿ ದೊರೆತಿರುವುದು ನಾವೆಲ್ಲ ಎಷ್ಟು ಪುರಾತನ ಇತಿಹಾಸವಿರುವ ಭಾಷೆಯೊಂದಿಗೆ ಬದುಕುತ್ತಿದ್ದೇವೆ ಅನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ ಇದು ನಮ್ಮೆಲ್ಲರ ಹೆಮ್ಮೆಕೂಡ.
ಸರ್ಕಾರಿ ಶಾಲೆಗಳು,ಪದವಿ ಪೂರ್ವ ಕಾಲೇಜುಗಳಲ್ಲಿ ಅಲ್ಪಸ್ವಲ್ಪ ಕನ್ನಡ ಉಳಿದಿದೆ,ಖಾಸಗೀಕರಣದ ಪ್ರಭಾವದಿಂದ ಸಾವಿರಾರು ಕನ್ನಡ ಶಾಲೆಗಳು ವರ್ಷ ವರ್ಷ ಮುಚ್ಚುತ್ತಿರುವುದು ವಿಷಾದನೀಯ. ಕನ್ನಡದಲ್ಲಿ ಓದಿದವರಿಗೆ ಮೊದಲ ಆದ್ಯತೆ ಎಲ್ಲಾ ರಂಗದಲ್ಲೂ ದೊರೆಯುವಂತಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಪ್ರಾದ್ಯಪಕರಾದ ಹೆಚ್. ಕೆ ಅಶೋಕ್ ರವರು ಕನ್ನಡ ಸಾಹಿತ್ಯ, ಕನ್ನಡದ ಶ್ರೇಷ್ಟತೆಯ ಬಗ್ಗೆ ಹಲವಾರು ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದಂತ ಸಂಸ್ಥೆಯ ಪ್ರಾಂಶುಪಾಲರಾದ ಡಾ|| ಎಂ.ಕೆ.ಹರೀಶ್ ರವರು ಮಾತನಾಡುತ್ತಾ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಕಲೆ ಸಾಹಿತ್ಯ ಇನ್ನಿತರ ಚಟುವಟಿಕೆಗಳಲ್ಲಿ ಹೆಚ್ಚು ಪರಿಣಿತರಿದ್ದಾರೆ ಅವರಿಗೆ ಹೆಚ್ಚಿನ ಮೂಲಭೂತ ಸೌಲಭ್ಯಗಳು ಒದಗಬೇಕಾಗಿದೆ ಜೊತೆಗೆ ವೈದ್ಯಕೀಯ ಪದವಿ,ತಂತ್ರಜ್ಞಾನ ಪದವಿ ಇನ್ನಿತರ ಪದವಿಗಳನ್ನು ಕನ್ನಡದಲ್ಲಿ ಸ್ಥಾಪಿಸಬೇಕು ಆಗ ಕನ್ನಡಿಗರಿಗೆ ಹೆಚ್ಚಿನ ಅನುಕೂಲ ವಾಗುತ್ತದೆ.
ಕಾಲೇಜಿನ ಬೋಧಕರಾದ ಸುದೀರ್ ಡಿಸೋಜ, ಹೆಚ್ .ಡಿ ಕುಮಾರ್, ಡಾ||ಸಹನ, ಹರ್ಷ, ಡಾ||ಕೋಮಲ, ಚೇತನ್, ಹರೀಶ್, ಡಾ||ಅರುಣ್ ಕುಮಾರ್, ಕು||ಚೈತ್ರ, ಕು||ಪೂರ್ಣಿಮಾ, ಶೃತಿ, ವೇದಿಕೆ ಹಂಚಿಕೊಂಡರು.೪೦೦ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು ನೃತ್ಯ ಸಂಗೀತ ಕಾರ್ಯಕ್ರಮ ಕೂಡ ನಡೆಯಿತು.ವಿದ್ಯಾರ್ಥಿನಿ ಲಕ್ಷ್ಮಿ ನಿರೂಪಣೆ ನಡೆಸಿಕೊಟ್ಟರು.