Sunday, November 24, 2024
Homeಸುದ್ದಿಗಳುಇಂದು ಖಂಡಗ್ರಾಸ ಚಂದ್ರ ಗ್ರಹಣ ಯಾವ ರಾಶಿಯವರಿಗೆ ಶುಭ?

ಇಂದು ಖಂಡಗ್ರಾಸ ಚಂದ್ರ ಗ್ರಹಣ ಯಾವ ರಾಶಿಯವರಿಗೆ ಶುಭ?

 

ಇಂದು ಖಂಡಗ್ರಾಸ ಚಂದ್ರ ಗ್ರಹಣ. ರಾಹುಗ್ರಸ್ತ ಗ್ರಸ್ತೋದಯ ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ. ಚಂದ್ರ ಗ್ರಹಣವು ಯಾವಾಗಲೂ ಹುಣ್ಣಿಮೆಗಳಲ್ಲಿ ಸಂಭವಿಸುತ್ತದೆ. ಜ್ಯೋತಿಷ್ಯ ರೀತಿಯಾಗಿ 4 ರಾಶಿಯವರಿಗೆ ಶುಭ, 4 ರಾಶಿಯವರಿಗೆ ಅಶುಭ ಹಾಗೂ 4 ರಾಶಿಯವರಿಗೆ ಮಿಶ್ರ ಫಲವನ್ನು ಈ ಗ್ರಹಣದಿಂದ ತಿಳಿಸಲಾಗುತ್ತದೆ. ರಾಹು ಮೇಷ ರಾಶಿಯಲ್ಲಿ ಇರುವುದರಿಂದ ಈ ಗ್ರಹಣವು ಮೇಷ ರಾಶಿಯಲ್ಲಿ ಆಗುತ್ತಿದೆ. ಇನ್ನು ಯಾವ ರಾಶಿಯವರಿಗೆ ಮೇಷ 3, 6, 10 ಅಥವಾ 11ನೇ ಮನೆಯೋ ಅಂಥವರಿಗೆ ಶುಭ ಫಲ ಇದೆ. ಕುಂಭ, ವೃಶ್ಚಿಕ, ಕರ್ಕಾಟಕ, ಮಿಥುನ ರಾಶಿ ಇವರು ಶುಭ ಫಲವನ್ನು ಪಡೆಯುತ್ತಾರೆ. ಮೇಷ ರಾಶಿಯು 1, 4, 8 ಅಥವಾ 12ನೇ ಮನೆ ಆಗಿರುವವರಿಗೆ ಅಶುಭ ಫಲ ಇದೆ. ಅಂದರೆ, ಮೇಷ, ಮಕರ, ಕನ್ಯಾ ಹಾಗೂ ವೃಷಭ ರಾಶಿಯವರಿಗೆ ಅಶುಭ ಫಲ. 2, 5, 7 ಅಥವಾ 9ನೇ ಮನೆಯಲ್ಲಿ ಗ್ರಹಣ ಸಂಭವಿಸುವವರಿಗೆ, ಮೀನ, ಧನುಸ್ಸು, ತುಲಾ ಹಾಗೂ ಸಿಂಹ ರಾಶಿಯವರಿಗೆ ಮಿಶ್ರ ಫಲ ಇರುತ್ತದೆ.

ಈ ಚಂದ್ರ ಗ್ರಹಣದ ಸ್ಪರ್ಶ ಕಾಲ ಮಧ್ಯಾಹ್ನ 2.38, ಗ್ರಹಣದ ಮಧ್ಯ ಕಾಲವು ಸಂಜೆ 4.29 ಹಾಗೂ ಮೋಕ್ಷ ಕಾಲ ಸಂಜೆ 6.19. ಮಧ್ಯಾಹ್ನದಲ್ಲಿ ಚಂದ್ರ ದರ್ಶನ ಸಾಧ್ಯವಿಲ್ಲ. ಆದರೆ, ಚಂದ್ರೋದಯ ಆಗುವುದು ಸಂಜೆ 5.59ಕ್ಕೆ. ಆ ನಂತರ ಕಾಣಿಸುತ್ತದೆ. ಆದರೆ ಮೋಕ್ಷ ಕಾಲ ಸಂಜೆ 6.19ಕ್ಕೆ ಇರುವುದರಿಂದ ಈ ಮಧ್ಯದ 20 ನಿಮಿಷದಲ್ಲಿ ಚಂದ್ರ ಗ್ರಹಣವೂ ದರ್ಶನ ಆಗಿ, ಇಡೀ ಗ್ರಹಣ ಮುಗಿದು ಹೋಗುತ್ತದೆ. ಒಟ್ಟಾರೆಯಾಗಿ ಈ ಗ್ರಹಣದ ಅವಧಿಯು 3 ಗಂಟೆ 40 ನಿಮಿಷ ಇರುತ್ತದೆ.

ಚಂದ್ರ ಗ್ರಹಣ ಸ್ಪರ್ಶ ಕಾಲ, ಮಧ್ಯ ಕಾಲ ಹಾಗೂ ಮೋಕ್ಷ ಕಾಲ ಹೀಗೆ ಮೂರು ಬಾರಿ ಧರಿಸಿದ ಬಟ್ಟೆಯ ಸಮೇತ ಸ್ನಾನ ಮಾಡುವುದು ಶಾಸ್ತ್ರ ಸಮ್ಮತವಾದದ್ದು. ಈ ಗ್ರಹಣದ ವೇಳೆಯಲ್ಲಿ ದೇವರ ಸ್ಮರಣೆಗೆ, ಜಪ- ತಪಗಳನ್ನು, ದೇವರ ಧ್ಯಾನವನ್ನು ಮಾಡಬೇಕು.

ಈ ಚಂದ್ರ ಗ್ರಹಣದಲ್ಲಿ ಯಾವ ದಾನ ಮಾಡಬೇಕು ಅಂದರೆ, ಈ ಬಾರಿಯದು ರಾಹುಗ್ರಸ್ತ ಚಂದ್ರಗ್ರಹಣ. ಆ ಕಾರಣಕ್ಕೆ ರಾಹುವಿನ ಸಲುವಾಗಿ ಉದ್ದಿನ ಬೇಳೆ, ಚಂದ್ರನಿಗೆ ಭತ್ತ ಅಥವಾ ಅಕ್ಕಿ, ಇದರ ಜತೆಗೆ ಚಂದ್ರಬಿಂಬವನ್ನು ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ, ದಕ್ಷಿಣೆ ಸಹಿತವಾಗಿ ದಾನ ಮಾಡಬೇಕು. ಗ್ರಹಣ ಮಧ್ಯಾಹ್ನ ದರ್ಶನ ಆಗದಿದ್ದರೂ ಕನಿಷ್ಠ ನಾಲ್ಕು ಗಂಟೆ ಮುಂಚಿತವಾಗಿ ಯಾವುದೇ ಆಹಾರ ಸೇವನೆ ಮಾಡದಿರುವುದು ಉತ್ತಮ. ಗರ್ಭಿಣಿಯರಿಗೆ, ಮಕ್ಕಳಿಗೆ, ವಯಸ್ಸಾದವರಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ಇದರಿಂದ ವಿನಾಯಿತಿ ಇದೆ. ಗ್ರಹಣ ಬಿಟ್ಟ ನಂತರದಲ್ಲಿ ಆಹಾರ ಸೇವನೆ ಮಾಡಬಹುದು. ಇನ್ನು ದ್ವಾದಶ ರಾಶಿಗಳ ಮೇಲೆ ಗ್ರಹಣದ ಪ್ರಭಾವ ಹೀಗಿರುತ್ತದೆ.

  • ಗ್ರಹಣ ಸ್ಪರ್ಶ ಕಾಲ: ಮಧ್ಯಾಹ್ನ 2.38
  • ಗ್ರಹಣ ಮೋಕ್ಷ ಕಾಲ: ಸಂಜೆ 6.19

 

ಮೇಷ: ನಿಮ್ಮದೇ ರಾಶಿಯಲ್ಲಿ ನಡೆಯುವುದರಿಂದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ವಹಿಸಿ. ಕಡ್ಡಾಯವಾಗಿ ಸಂಚಾರವನ್ನು ಮಾಡಬೇಡಿ. ಗ್ರಹಣ ಶಾಂತಿಯನ್ನು ಮಾಡಿಸಿಕೊಳ್ಳಿ. ಹಳೆಯ ಕಾಯಿಲೆಗಳಿದ್ದಲ್ಲಿ ಅದು ಉಲ್ಬಣ ಆಗುವಂಥ ಸಾಧ್ಯತೆ ಇದೆ.

ವೃಷಭ: ನಿಮ್ಮ ರಾಶಿಗೆ ಹನ್ನೆರಡನೇ ಮನೆಯಲ್ಲಿ ಗ್ರಹಣ ಸಂಭವಿಸುವುದರಿಂದ ನಷ್ಟ ಆಗುವ ಸಾಧ್ಯತೆ ಇದೆ. ಅಮೂಲ್ಯವಾದ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಳ್ಳುವ ಕಡೆಗೆ ಗಮನ ನೀಡಿ. ಬೆಲೆಬಾಳುವ ವಸ್ತುಗಳನ್ನು ಬೇರೆಯವರನ್ನು ನಂಬಿ ನೀಡದಿರಿ.

ಮಿಥುನ: ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ಗ್ರಹಣ ಸಂಭವಿಸುವುದರಿಂದ ವ್ಯಾಪಾರ- ವ್ಯವಹಾರಗಳಲ್ಲಿ ಲಾಭ ಆಗುವ ಸಾಧ್ಯತೆ ಇರುತ್ತದೆ. ಆದರೆ, ಲಾಭ ಬರುವುದು ತಡ ಆಗಬಹುದು. ಈ ಹಿಂದೆ ಮಾಡಿದ್ದ ಹೂಡಿಕೆಗೆ ಈಗ ಲಾಭ ಬರುತ್ತದೆ.

ಕರ್ಕಾಟಕ: ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳ ನಿರೀಕ್ಷೆ ಮಾಡುತ್ತಿರುವವರಿಗೆ ದೊರೆಯಬಹುದು. ಇನ್ನು ನಿಮ್ಮ ಶ್ರಮವನ್ನು ಗುರುತಿಸಿ, ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ಕರ್ಮ ಸ್ಥಾನವಾದ್ದರಿಂದ ನಿಮ್ಮಿಂದ ಉತ್ತಮ ಕೆಲಸಗಳಾಗುವಂತೆ ಪ್ರೇರಣೆ ದೊರೆಯುತ್ತದೆ.

ಸಿಂಹ: ನಿಮ್ಮ ರಾಶೀಯಿಂದ ಒಂಬತ್ತನೇ ಮನೆಯಾದ್ದರಿಂದ ತಂದೆಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸಿ, ಪಿತ್ರಾರ್ಜಿತ ಆಸ್ತಿ ವಿಚಾರ, ಭೂ ವ್ಯಾಜ್ಯ ಇತ್ಯರ್ಥ, ಕೋರ್ಟ್- ಕಟ್ಲೆಗಳಲ್ಲಿ ಸಂಧಾನದ ಮೂಲಕ ಪರಿಹಾರ ಸಾಧ್ಯತೆ ಇದೆ.

ಕನ್ಯಾ: ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿಯಾದ್ದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಕೋಪದ ಕೈಲಿ ಬುದ್ಧಿ ಕೊಡಬೇಡಿ. ಚರ್ಮ ವ್ಯಾಧಿಗಳಾಗಬಹುದು; ಆ ಬಗ್ಗೆಯೂ ಎಚ್ಚರಿಕೆ ಅಗತ್ಯ. ಕಡ್ಡಾಯವಾಗಿ ಗ್ರಹಣ ಶಾಂತಿ ಮಾಡಿಸಿಕೊಳ್ಳಿ.

ತುಲಾ: ಈ ರಾಶಿಯಿಂದ ಏಳನೇ ಮನೆಯಾದ್ದರಿಂದ ಸಂಸಾರದಲ್ಲಿ ಒಂದಿಷ್ಟು ಭಿನ್ನಾಭಿಪ್ರಾಯ, ಕಲಹಗಳು ಏರ್ಪಡಬಹುದು. ಅದೇ ಸಮಯದಲ್ಲಿ ದೂರದ ಪ್ರದೇಶಗಳಿಂದ ಶುಭ ಸುದ್ದಿ ಸಹ ಬರಬಹುದು. ಒಟ್ಟು ಮಿಶ್ರ ಫಲಗಳನ್ನು ಕಾಣುತ್ತೀರಿ.

ವೃಶ್ಚಿಕ: ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ಗ್ರಹಣ ಸಂಭವಿ ಸುತ್ತಿರುವುದರಿಂದ ಶತ್ರುಗಳು ಗೊಂದಲಕ್ಕೆ ಒಳಗಾಗುತ್ತಾರೆ, ಆಸ್ತಿ ಮಾರಾಟಕ್ಕೆ ಇಟ್ಟಿದ್ದಲ್ಲಿ ಅದು ಸಾಧ್ಯ ಆಗುತ್ತದೆ. ಆದರೆ, ನಿಮ್ಮ ರಾಶಿಗೆ ಚಂದ್ರ ನೀಚ ಆದ್ದರಿಂದ ಮನಸ್ಸಿನ ಮೇಲೆ ನಿಯಂತ್ರಣ ಮುಖ್ಯ.

ಧನುಸ್ಸು: ಐದನೇ ಮನೆಯಲ್ಲಿ ಗ್ರಹಣ ಸಂಭವಿಸುವುದರಿಂದ ಮಕ್ಕಳ ವಿಚಾರದಲ್ಲಿ ಜಾಗ್ರತೆ ವಹಿಸಿ. ಇನ್ನು ನೀವು ಈ ಹಿಂದೆ ಮಾಡಿದ್ದ ಉತ್ತಮ ಕೆಲಸಗಳಿಗೆ ಈಗ ಫಲ ದೊರೆಯುವ, ಲಾಭ ಆಗುವ ಅವಕಾಶಗಳಿವೆ.

ಮಕರ: ನಿಮ್ಮ ರಾಶಿಯಿಂದ 4ನೇ ಮನೆ ಯಾದ್ದರಿಂದ ತಾಯಿಯ ಆರೋ ಗ್ಯದ ಕಡೆಗೆ ಗಮನ ವಹಿಸಿ. ಇನ್ನು ಮನೆ, ವಾಹನ ದುರಸ್ತಿ ಸಾಧ್ಯತೆ ಇದೆ. ವಿದ್ಯಾರ್ಥಿ ಗಳಿಗೆ ಹಿನ್ನಡೆ ಇದ್ದು, ನಾಲಗೆ ಮೇಲೆ ಹಿಡಿತ ಇರಲಿ.

ಕುಂಭ: ನಿಮ್ಮ ರಾಶಿಯಿಂದ ಮೂರನೇ ಮನೆಯಾದ್ದರಿಂದ ಸೋದರ- ಸೋದರಿಯರಿಂದ ಹಣಕಾಸು ಅನುಕೂಲ ಆಗುವ ಅವಕಾಶ ಇದೆ. ಇದರ ಜತೆಗೆ ಹಣಕಾಸಿನ ಹರಿವು ಹೆಚ್ಚಳ ಆಗಲಿದ್ದು, ಈಗಿನ ಗ್ರಹಣ ನಿಮಗೆ ಆತ್ಮವಿಶ್ವಾಸ ನೀಡಲಿದೆ.

ಮೀನ: ನಿಮ್ಮ ರಾಶಿಯಿಂದ ಎರಡನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಹಣ ಬಂದಂತೆಯೇ ಬಂದು, ಹೋಗಿದ್ದು ಗೊತ್ತೇ ಆಗುವುದಿಲ್ಲ. ಇನ್ನು ಕುಟುಂಬದಲ್ಲಿನ ಆಗು- ಹೋಗುಗಳ ಬಗ್ಗೆ ಲಕ್ಷ್ಯ ವಹಿಸಿ, ಇಲ್ಲದಿದ್ದಲ್ಲಿ ನಂತರ ಪರಿತಪಿಸಬೇಕಾಗುತ್ತದೆ.

RELATED ARTICLES
- Advertisment -spot_img

Most Popular