: ರಾಜ್ಯದ ಜನತೆ ಅದರಲ್ಲೂ ಕರಾವಳಿ ಭಾಗದ ಜನರು ಕುತೂಹಲದಿಂದ ಕಾಯುತ್ತಿರುವ ಹಿಜಾಬ್ ತೀರ್ಪು(Hijab vedict) ಇಂದು ಗುರುವಾರ ಬೆಳಗ್ಗೆ 10.30ಕ್ಕೆ ಪ್ರಕಟವಾಗುತ್ತಿದ್ದು, ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ ನತ್ತ ನೆಟ್ಟಿದೆ.
ಕಳೆದ ವರ್ಷ ಹಿಜಾಬ್ ವಿವಾದ ಉಡುಪಿಯ ಕಾಲೇಜೊಂದರಲ್ಲಿ ಆರಂಭವಾಗಿ ನಂತರ ಅದು ಕರಾವಳಿ ಭಾಗದಿಂದ ಇಡೀ ರಾಜ್ಯಕ್ಕೆ ಅಷ್ಟೇ ಏಕೆ ದೇಶದ ಹಲವು ಭಾಗಗಳಿಗೆ ಕೆನ್ನಾಲಿಗೆಯಂತೆ ವ್ಯಾಪಿಸಿ ತೀವ್ರ ವಿವಾದವುಂಟಾಗಿ, ಹಿಂಸಾಚಾರ ಕೂಡ ನಡೆದಿತ್ತು. ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಗುರುತು ಸೂಚಿಸುವ ಬಟ್ಟೆಗಳನ್ನು ಧರಿಸಿಕೊಂಡು ವಿದ್ಯಾರ್ಥಿಗಳು ಹೋಗಬಾರದು ಎಂಬ ಕರ್ನಾಟಕ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಉಡುಪಿಯ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ರಾಜ್ಯ ಸರ್ಕಾರದ ಪರವಾಗಿ ತೀರ್ಪು ನೀಡಿ, ನಿಯಮವನ್ನು ಎತ್ತಿ ಹಿಡಿದಿತ್ತು. ಅದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಸುದೀರ್ಘ ವಾದ-ವಿವಾದ ಆಲಿಸಿದ ನ್ಯಾಯಾಲಯ ಇಂದು ಬೆಳಗ್ಗೆ ಅಂತಿಮ ತೀರ್ಪು ಪ್ರಕಟಿಸಲಿದೆ.
ಎಲ್ಲೆಡೆ ಬಿಗಿ ಕಟ್ಟೆಚ್ಚರ: ಹಿಜಾಬ್ ವಿವಾದ ಬಹಳ ಸೂಕ್ಷ್ಮವಾಗಿರುವುದರಿಂದ ಯಾವುದೇ ಪರಿಸ್ಥಿತಿ ಉಂಟಾದರೂ ಅಚ್ಚರಿಯಿಲ್ಲ. ಯಾವುದೇ ಹಿಂಸಾಚಾರ, ಸಾವು-ನೋವು ಉಂಟಾಗದಂತೆ ಪೊಲೀಸರು ಬೆಂಗಳೂರು, ಕರಾವಳಿ ಭಾಗ ಸೇರಿದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ.ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಿ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲು ಇರುವಂತೆ ಆಯಾ ವಲಯದ ಡಿಸಿಪಿಗಳಿಗೆ ಉಸ್ತುವಾರಿ ವಹಿಸಲಾಗಿದೆ