ಪರಿಶಿಷ್ಟ ಜಾತಿ, ಪಂಗಡದ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನಗಳ ಹಂಚಿಕೆ ಅನುಪಾತ ಬದಲಾವಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯ ದಲಿತ ಉದ್ದಿಮೆದಾರರ ಸಂಘದ ನಿಯೋಗದ ಜತೆಗೆ ಶನಿವಾರ ಸಭೆ ನಡೆಸಿ ಈ ನಿರ್ಧಾರ ಪ್ರಕಟಿಸಿದ್ದಾರೆ
ಎಸ್ಸಿ, ಎಸ್ಟಿ ಉದ್ದಿಮೆದಾರರಿಗೆ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿಯಲ್ಲಿ ಶೇ.60, ರಾಜ್ಯಮಟ್ಟದ ಸಮಿತಿಯಲ್ಲಿ ಶೇ.40ರಷ್ಟು ಕೈಗಾರಿಕಾ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ಆದರೆ ದಲಿತ ಉದ್ದಿಮೆದಾರರಲ್ಲಿ ಬಹುತೇಕರ ಯೋಜನಾವೆಚ್ಚ 15 ಕೋಟಿ ರೂ.ಗಿಂತ ಕಡಿಮೆಯಿರುವ ಕಾರಣ ಜಿಲ್ಲಾ ಹಂತದ ನಿವೇಶನಗಳ ಹಂಚಿಕೆ ಪ್ರಮಾಣ ಹೆಚ್ಚಿಸಬೇಕು ಎಂಬ ನಿಯೋಗದ ಮನವಿಗೆ ಸಿಎಂ ತಕ್ಷಣ ಸ್ಪಂದಿಸಿದರು. ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ ಶೇ. 70 ಹಾಗೂ ರಾಜ್ಯಮಟ್ಟದ ಸಮಿತಿಯಲ್ಲಿ ಶೇ.30ರಷ್ಟು ನಿವೇಶನಗಳ ಹಂಚಿಕೆಗೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ದಲಿತ ಉದ್ದಿಮೆದಾರರಿಗೆ 2009ರಲ್ಲಿ ನಿಗದಿಪಡಿಸಿದ ಮೀಸಲಿನಂತೆ ಕೈಗಾರಿಕಾ ನಿವೇಶನ ಹಂಚಿಕೆಯಲ್ಲಿನ ಕೊರತೆ ಭರ್ತಿ ಮಾಡಲು ಕ್ರಮಕೈಗೊಳ್ಳುವ ಭರವಸೆ ನೀಡಿದರು.