Sunday, November 24, 2024
Homeಸುದ್ದಿಗಳುರಾಜ್ಯಬೂಸಾ ಖರೀದಿಗೆ ಕೊಟ್ಟಿದ್ದು ಕೆ 1.20 ಲಕ್ಷ: ಉತ್ತರಿಸಲು ಪರದಾಡಿದ ಪ್ರಜ್ವಲ್ ರೇವಣ್ಣ 

ಬೂಸಾ ಖರೀದಿಗೆ ಕೊಟ್ಟಿದ್ದು ಕೆ 1.20 ಲಕ್ಷ: ಉತ್ತರಿಸಲು ಪರದಾಡಿದ ಪ್ರಜ್ವಲ್ ರೇವಣ್ಣ 

ಬೂಸಾ ಖರೀದಿಗೆ ಕೊಟ್ಟಿದ್ದು ಕೆ 1.20 ಲಕ್ಷ: ಉತ್ತರಿಸಲು ಪರದಾಡಿದ ಪ್ರಜ್ವಲ್ ರೇವಣ್ಣ

 

ಬೆಂಗಳೂರು: ‘ನಿಮ್ಮ ಕಥೆ-ಚಿತ್ರಕಥೆ-ಸಂಭಾಷಣೆ ಎಲ್ಲಾ ನಮಗೆ ಬೇಡ. ವಕೀಲರು ಕೇಳಿದ ಪ್ರಶ್ನೆಗಷ್ಟೇ ಉತ್ತರ ಕೊಡಿ. ನೀವು ಏನು ಉತ್ತರಿಸುತ್ತೀರೋ ಅದನ್ನು ದಾಖಲು ಮಾಡಿಕೊಳ್ಳುತ್ತೇನೆ…’, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಹೈಕೋರ್ಟ್‌ ಕಿವಿ ಹಿಂಡಿದ ಪರಿಯಿದು.

 

‘ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಅವರು ಚುನಾವಣೆಯಲ್ಲಿ ಸಾಕಷ್ಟು ಅಕ್ರಮ ಎಸಗಿದ್ದು ಆಯ್ಕೆಯನ್ನು ಅಸಿಂಧುಗೊಳಿಸಬೇಕು’ ಎಂದು ಕೋರಿ ಹೈಕೋರ್ಟ್ ವಕೀಲ ಜಿ.ದೇವರಾಜೇಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಮುಂದುವರಿಸಿತು.

 

ವಿಚಾರಣೆ ವೇಳೆ ಕಟಕಟೆಯಲ್ಲಿ ನಿಂತ ಪ್ರಜ್ವಲ್ ರೇವಣ್ಣ ಅವರನ್ನು ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಸುದೀರ್ಘ ಪಾಟಿ ಸವಾಲಿಗೆ ಗುರಿಪಡಿಸಿ, ‘ಚುನಾವಣಾ ಅಧಿಕಾರಿಗಳ ತಂಡವು 2019ರ ಏಪ್ರಿಲ್ 17ರಂದು ಹೊಳೆನರಸೀಪುರದ ಚೆನ್ನಾಂಬಿಕಾ ಥಿಯೇಟರ್ ಒಳಗೆ ನಿಂತಿದ್ದ ಕೆಎ01ಎಂಎಚ್ 4477 ಇನ್ನೋವಾ ಕಾರಿನಲ್ಲಿದ್ದ ಕೆ 1.20 ಲಕ್ಷ ಮೊತ್ತವನ್ನು ವಶಪಡಿಸಿಕೊಂಡಿತ್ತು. ಹೌದಲ್ಲವೇ…’ ಎಂದು ಪ್ರಶ್ನಿಸಿದರು.

 

‘ಹೌದು’ ಅಥವಾ ‘ಇಲ್ಲ’ ಎಂಬ ಕ್ಲುಪ್ತ ಉತ್ತರ ನೀಡುವ ಬದಲಿಗೆ ಪ್ರಜ್ವಲ್ ರೇವಣ್ಣ, ‘ಇಲ್ಲ ಸರ್, ಕಾರು ಥಿಯೇಟರ್ ಒಳಗೆ ನಿಂತಿರಲಿಲ್ಲ. ಕಾಂಪೌಂಡ್ ಒಳಗೆ ನಿಂತಿತ್ತು!. ಆವತ್ತು ಆ ಹಣವನ್ನು ಐಟಿ (ಆದಾಯ ತೆರಿಗೆ) ಅಧಿಕಾರಿಗಳೇ ತಂದು ಕಾರಿನಲ್ಲಿ ದುರುದ್ದೇಶದಿಂದ ಇರಿಸಿ ದೂರು ದಾಖಲಿಸಿದ್ದರು. ಅಂದು ನನ್ನ ತಂದೆ ಲೋಕೋಪಯೋಗಿ ಸಚಿವರಾಗಿದ್ದು, ಅವರ ಎಸ್ಕಾರ್ಟ್‌ನವರಿಗೆ ಸೇರಿದ ಸರ್ಕಾರಿ ಕಾರಾಗಿತ್ತು. ಅಷ್ಟಕ್ಕೂ ಆ ಹಣವನ್ನು ನನ್ನ ತಾಯಿ ನಮ್ಮ ಮನೆಯ ಸೇವಕನಿಗೆ ಹಸುಗಳಿಗೆ ಬೂಸಾ ತರಲು ನೀಡಿದ್ದರು. ಈಗಾಗಲೇ ಈ ದೂರಿನ ತನಿಖೆ ನಡೆದಿದ್ದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲಾಗಿದೆ…!!’ ಎಂದು ವಿವರಿಸಿದರು.

 

 

ಪದೇ ಪದೇ ಪ್ರತಿಯೊಂದು ಪ್ರಶ್ನೆಗೂ ವಿವರಣೆ ನೀಡಲು ಉತ್ಸಾಹ ತೋರುತ್ತಿದ್ದ ಪ್ರಜ್ವಲ್ ರೇವಣ್ಣ ಅವರಿಗೆ ನ್ಯಾಯಮೂರ್ತಿಗಳು, ‘ರೀ, ಕಥೆ ಹೇಳೋದೇನೂ ಬೇಡ. ಕೇಳಿದಷ್ಟು ಮಾತ್ರಕ್ಕೆ ಉತ್ತರ ನೀಡಿ’ ಎಂದು ಮಾತಿನಲ್ಲೇ ತಿವಿದರು.

 

ಚುನಾವಣೆ ದಿನಾಂಕ ಘೋಷಣೆ ಆದ ಮೇಲೆ ತಮ್ಮ ಕರ್ನಾಟಕ ಬ್ಯಾಂಕ್ ಖಾತೆಗೆ ತಂದೆ ಎಚ್.ಡಿ.ರೇವಣ್ಣ, ತಾಯಿ ಭವಾನಿ ರೇವಣ್ಣ ಸೇರಿದಂತೆ ಒಟ್ಟು 16 ಜನರಿಂದ ಸಂದಾಯವಾಗಿದ್ದ ಸಾಲ ರೂಪದ ಹಣ ಎಂದು ಪ್ರತಿಪಾದಿಸಲಾದ 1 27 ಲಕ್ಷದ ಮೊತ್ತಕ್ಕೆ ಸ್ಪಷ್ಟ ಉತ್ತರ ನೀಡಲು ಪರದಾಡಿ ದಾಖಲೆಗಳನ್ನು ಪುನಃ ಪುನಃ ತಿರುವಿ ಹಾಕಿದ ಪ್ರಜ್ವಲ್ ರೇವಣ್ಣ ಕೊನೆಗೇ, ‘ನನಗೆ ಹಾಲು ಮಾರಾಟದಿಂದ ಮತ್ತು ಕೃಷಿಯಿಂದ ಬಂದ ಆದಾಯವಿದೆ’ ಎಂದು ವಿವರಿಸಿದರು.

 

ಕೆಲವೊಂದು ಪ್ರಶ್ನೆಗಳಿಗೆ, ‘ಇದು ನನಗೆ ಗೊತ್ತಿಲ್ಲ. ನನ್ನ ಲೆಕ್ಕಪರಿಶೋಧಕರು ಹಾಗೂ ಬ್ಯಾಂಕ್ ಅಧಿಕಾರಿಗಳಿಂದ ವಿವರಣೆ ಪಡೆದುಕೊಂಡು ಬಂದು ಉತ್ತರಿಸುತ್ತೇನೆ’ ಎಂದು ಪ್ರಜ್ವಲ್ ಹೇಳಿದರು. ಈ ಮಾತಿಗೆ ನ್ಯಾಯಪೀಠ, ‘ರೀ, ನೀವು ಮನೆಗೆ ಹೋಗಿ ನಿಮ್ಮ ಅಮ್ಮನ ಬಳಿ ಉತ್ತರ ಪಡೆದು ಬಂದು ತಿಳಿಸುತ್ತೇನೆ ಎಂದು ಮಗುವಿನ ರೀತಿಯಲ್ಲಿ ಹೇಳುತ್ತಿದ್ದೀರಲ್ಲಾ, ಇದು ಪರೀಕ್ಷೆ ಇದ್ದಂತೆ’ ಎಂದು ಪುನಃ ಚುಚ್ಚಿತು.

 

ಸುದೀರ್ಘ ವಿಚಾರಣೆಯ ನಂತರ ಪ್ರಮೀಳಾ ನೇಸರ್ಗಿ, ‘ಪ್ರತಿವಾದಿಗಳು ಚುನಾವಣಾ ಆಯೋಗಕ್ಕೆ ಸಾಕಷ್ಟು ಸುಳ್ಳು ದಾಖಲೆಗಳನ್ನು ಒದಗಿಸಿದ್ದಾರೆ. ಇನ್ನೂ ಕೆಲವು ಡಿಜಿಟಲ್ ಸಾಕ್ಷ್ಯಗಳನ್ನು ಪ್ರದರ್ಶಿಸಬೇಕಿದ್ದು ಅದಕ್ಕೆ ಮುಂದಿನ ಮುದ್ದತಿನಲ್ಲಿ ಅವಕಾಶ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

 

ಈ ಮನವಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ ನ್ಯಾಯಪೀಠ, ‘ನಿಮ್ಮ ಡಿಜಿಟಲ್ ಸಾಕ್ಷ್ಯಗಳನ್ನು ತೆರೆದ ನ್ಯಾಯಾಲಯದಲ್ಲಿ ನಾನು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ಬೇಕಿದ್ದರೆ ಅದನ್ನು ಚೇಂಬರ್‌ನಲ್ಲಿ ಪರಿಶೀಲಿಸುತ್ತೇನೆ. ಅವುಗಳನ್ನೆಲ್ಲಾ ನೀವು ಪ್ರತಿವಾದಿ ವಕೀಲರಿಗೂ ನೀಡಿ ಆದಷ್ಟು ಬೇಗನೆ ಪಾಟಿ ಸವಾಲು ಮುಗಿಸಿ’ ಎಂದು ತಾಕೀತು ಮಾಡಿತು. ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಲಾಗಿದೆ.

RELATED ARTICLES
- Advertisment -spot_img

Most Popular