ಆಲೂರು : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮದುವೆಗೆ ತಂದ ಸಾಮಗ್ರಿ ಗಳ ಜೊತೆಗೆ ಮನೆ ಸಂಪೂರ್ಣವಾಗಿ ಸುಟ್ಟುಹೋಗಿರುವ ಘಟನೆ ಆಲೂರು ತಾಲ್ಲೂಕಿನ ಕವಳಿಕೆರೆ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಕಸಬಾ ಹೋಬಳಿ ಕವಳಿಕೆರೆ ಗ್ರಾಮದ ಬಸವರಾಜು ಬಿನ್ ಮಲ್ಲೇಗೌಡ ಎಂಬುವವರ ಮನೆ ಸೋಮವಾರ ಸುಮಾರು 12:30 ರ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹಚ್ಚಿಕೊಂಡು ಸಂಪೂರ್ಣವಾಗಿ ಮನೆ ಬೆಂಕಿಗೆ ಅಹುತಿಯಾಗಿದೆ. ಮನೆಯಲ್ಲಿದ್ದ ಟಿ.ವಿ, ಪ್ರೀಡ್ಜ್, ಪ್ಯಾನ್, ಮನೆಯಲ್ಲಿ ಬಳಸುತ್ತಿದ್ದ ಪಿಠೋಪಕರಣಗಳು ಬೆಂಕಿಯ ಕೆನ್ನಾಲಿಗೆ ಸುಟ್ಟು ಭಸ್ಮವಾಗಿವೆ. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದಾಗಿ ಮನೆಯಲ್ಲಿದ್ದ ಗ್ಯಾಸ್ ನ್ನು ಹೊಗೆಯಾಡುತ್ತಿದ್ದ ಸಂದರ್ಭದಲ್ಲಿ ಹಿಂದಿನ ಬಾಗಿಲಿನಿಂದ ಹೊರಗಡೆ ತಂದಿದ್ದಾರೆ ಇಲ್ಲದಿದ್ದರೆ ಅಕ್ಕ ಪಕ್ಕದ ಮನೆಯು ಬೆಂಕಿಯ ಅಹುತಿಗೆ ಸಿಲುಕಬೇಕಾಗುತ್ತಿತ್ತು. ಬಸವರಾಜು ಎಂಬುವವರ ಮಗನ ಮದುವೆಯು ಡಿಸೆಂಬರ್ 5 ಕ್ಕೆ ನಿಶ್ವಯವಾಗಿದ್ದು, ಮದುವೆಗೆ ಬೇಕಾಗಿರುವ ವಸ್ತ್ರಗಳನ್ನು ಖರೀದಿಸಿ ಮನೆಯಲ್ಲಿಟ್ಟಿದ್ದರು ಬಟ್ಟೆಬರಿಗಳು ಸಂಪೂರ್ಣವಾಗಿ ಸುಟ್ಟು ಬೂದಿಯಾಗಿವೆ. ಇದರಿಂದ ಸುಮಾರು 25 ಲಕ್ಷರೂ. ನಷ್ಟವಾಗಿದ್ದು ಜನಪ್ರತಿನಿಧಿಗಳು ಹಾಗೂ ಸರ್ಕಾರ ಪರಿಹಾರವನ್ನು ಒದಗಿಸಬೇಕು ಎಂದು ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟುಹೋದ ಮನೆಯ ವೀಕ್ಷಣೆಗೆ ಹಾಸನ ಜಿಲ್ಲಾ ವಿದ್ಯುತ್ ಪರಿವೀಕ್ಷಕಿ ಉಷಾ, ಆಲೂರು ಸೆಸ್ಕಾಂ ಎ.ಇ.ಇ ನಿರಂಜನ್ ಹಾಗೂ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಮಹೇಶ್, ಜೆ.ಡಿ.ಎಸ್ ಮುಖಂಡ ಕೆ.ಎಸ್ ಮಂಜೇಗೌಡ, ತಾ.ಪಂ ಮಾಜಿ ಸದಸ್ಯರಾದ ನಟರಾಜ್ ನಾಕಲಗೂಡು, ಗ್ರಾ.ಪಂ ಸದಸ್ಯ ಹಿರಿಯಣ್ಣಗೌಡ, ಕ.ರ.ವೇ ತಾಲ್ಲೂಕು ಅಧ್ಯಕ್ಷ ರಾಘವೇಂದ್ರ ಹೆಚ್.ವಿ ಮುಂತಾದವರು ಭೇಟಿ ನೀಡಿದ್ದರು.