ವಿದ್ಯುತ್ ಸ್ಪರ್ಶದಿಂದ 75 ಆನೆಗಳ ಸಾವು: ದುರಂತ ತಪ್ಪಿಸಲು ಮಾರ್ಗಸೂಚಿ, ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ರಾಜ್ಯದಲ್ಲಿ ರೈತರು ತಂತಿಗಳಿಗೆ ವಿದ್ಯುತ್ ಹಾಯಿಸುವುದರಿಂದ ಉಂಟಾಗುವ ಅನಾಹುತಗಳ ಬಗ್ಗೆ ಸಾವನ್ನು ತಡೆಯುವ ಬಗ್ಗೆ ಮಾರ್ಗಸೂಚಿ ರೂಪಿಸಲು ಒಂದು ಸಮಿತಿ ರಚಿಸುವಂತೆ ಹೈಕೋರ್ಟ್ ಹೇಳಿದೆ.
ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಸ್ಪರ್ಶದಿಂದ ವನ್ಯಜೀವಿಗಳು ಹಾಗೂ ಜನ ಸಾಮಾನ್ಯರ ಮರಣವನ್ನು ತಪ್ಪಿಸಲು ಸೂಕ್ತ ಮಾರ್ಗಸೂಚಿ ರೂಪಿಸಿ ಜಾರಿಗೊಳಿಸಲು ಉನ್ನತ ಮಟ್ಟದ ಸಮಿತಿ ರಚಿಸುವ ಕುರಿತು ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ಸೋಮವಾರ ನೋಟಿಸ್ ಜಾರಿ ಮಾಡಿದೆ. ರಾಜ್ಯದಲ್ಲಿ 75ರಷ್ಟು ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿವೆ ಎಂದು ಉಲ್ಲೇಖಿಸಲಾದ ದಾವೆಯೊಂದರ ವಿಚಾರಣೆ ವೇಳೆ ಈ ಸೂಚನೆ ನೀಡಲಾಗಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿದ ಪೀಠವು ಈ ಬಗ್ಗೆ ನಿಲುವನ್ನು ತಿಳಿಸುವಂತೆ ಸೂಚಿಸಿದೆ.
ಎರಡು ಆನೆಗಳ ಸಾವಿನ ಪ್ರಕರಣ
ಶಿವಮೊಗ್ಗದ ಆಯನೂರು ತಾಲೂಕಿನ ಚೆನ್ನಹಳ್ಳಿಯಲ್ಲಿ ರೈತರೊಬ್ಬರು ತಮ್ಮ ಜಮೀನಿನಲ್ಲಿ ಮೆಕ್ಕಜೋಳ ಬೆಳೆದಿದ್ದರು. ಜಮೀನಿನ ಸುತ್ತ ತಂತಿ ಅಳವಡಿಸಿ, ಅದಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಿದ್ದರು. ಭದ್ರಾ ಸಂರಕ್ಷಿತ ಅರಣ್ಯ ಪ್ರದೇಶದಿಂದ ಏಳು ಆನೆಗಳು ಆಹಾರ ಅರಸಿ ಬಂದಿದ್ದವು. ಅದರಲ್ಲಿ ಎರಡು ಗಂಡು ಆನೆಗಳು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದವು. ಇದನ್ನು ಆಧರಿಸಿ ಅರ್ಜಿದಾರರು ಕೋರ್ಟ್ ಮೊರೆ ಹೊಕ್ಕಿದ್ದರು.
ಇಂಥಹುದೇ ಘಟನೆಗಳು ರಾಜ್ಯದಲ್ಲಿ ಪದೇಪದೆ ಸಂಭವಿಸುತ್ತಿವೆ. ಅದರಲ್ಲೂ ಚಾಮರಾಜನಗರದಲ್ಲಿ 36 ಆನೆಗಳು ಈ ರೀತಿ ಸಾವನ್ನಪ್ಪಿವೆ ಎಂದು ಉಲ್ಲೇಖಿಸಿದ್ದರು. ಮೈಸೂರಿನಲ್ಲಿ 12, ಕೊಡಗಿನಲ್ಲಿ 10, ಬೆಂಗಳೂರಿನಲ್ಲಿ 7, ಹಾಸನದಲ್ಲಿ 4 ಮತ್ತು ಚಿಕ್ಕಮಗಳೂರಿನಲ್ಲಿ 1 ಆನೆ ಈ ರೀತಿಯ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿವೆ. ರಾಜ್ಯದಲ್ಲಿ ಈ ರೀತಿ 75 ಆನೆಗಳು ಮೃತಪಟ್ಟಿದ್ದನ್ನು ಉಲ್ಲೇಖಿಸಲಾಗಿದೆ.