ಬೆಂಗಳೂರು: ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ಭಾಷೆಗೆ ಗೌರವ ಸಲ್ಲಿಸಲು ರಾಜ್ಯ ಸರ್ಕಾರ ಆರಂಭಿಸಿರುವ “ಕೋಟಿ ಕಂಠ ಗಾಯನ” ಅಭಿಯಾನಕ್ಕೆ ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಬೆಂಬಲ ಸೂಚಿಸಿದೆ.
ಬೆಂಗಳೂರಿನಿಂದ ಗ್ವಾಲಿಯರ್ಗೆ ತೆರಳಿದ ಸ್ಪೈಸ್ ಜೆಟ್ ವಿಮಾನದಲ್ಲಿ ಪೈಲಟ್ ಹಾಗೂ ಪ್ರಯಾಣಿಕರು ಡಾ. ರಾಜ್ಕುಮಾರ್ ಅವರು ಹಾಡಿರುವ ಆಕಸ್ಮಿಕ ಚಿತ್ರದ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂಬ ಹಾಡನ್ನು ಹಾಡುವ ಮೂಲಕ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಆಕಾಶದಲ್ಲಿ ಮೊಳಗಿದ ಕೋಟಿ ಕಂಠ ಗಾಯನ. ಕನ್ನಡ ಹಾಡುಗಳನ್ನು ಹಾಡಿ ಕನ್ನಡಾಭಿಮಾನ ಮೆರೆದ ಸ್ಪೈಸ್ ಜೆಟ್ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು ಎಂದು ಬರೆದುಕೊಂಡಿದ್ದಾರೆ.