ಬಕ್ರೀದ್ ಹಿನ್ನೆಲೆ:ಅಕ್ರಮ ಜಾನುವಾರು ಸಾಗಾಟ ತಡೆಗಟ್ಟುವಂತೆ ಪೊಲೀಸರಿಗೆ ಬಜರಂಗದಳ ಮನವಿ
ಸಕಲೇಶಪುರ – ಕರ್ನಾಟಕ ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ – ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದು ರಾಜ್ಯದಲ್ಲಿ ಅಕ್ರಮ ಜಾನುವಾರು ಸಾಗಾಟ ಹಾಗೂ ಕುರ್ಬಾನಿಗೆ ನಿಷೇಧವಿದೆ. ಅಕ್ರಮವಾಗಿ ಸಾಗಾಟ ಮಾಡುವವರ ಮೇಲೆ ನಿಗಾ ಇಡಲು ನಿಗದಿತ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಹಾಕುವಂತೆ ಮತ್ತು ಗಸ್ತು ಹೆಚ್ಚಿಸಿ ಅಕ್ರಮ ಸಾಗಾಣಿಕೆ ಮಾಡುವ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಬಜರಂಗದಳ ಕಾರ್ಯಕರ್ತರು ಡಿವೈಎಸ್ಪಿ ಅವರಿಗೆ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಮೂಲಕ ಮನವಿ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕ ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದೆ. ಇದರ ಅನ್ವಯ ಕುರ್ಬಾನಿಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ರಾಜ್ಯದಲ್ಲಿ ಪ್ರಾಣಿಬಲಿ ನಿಷೇಧ ಕಾಯ್ದೆ 1959 ತಿದ್ದುಪಡಿ 1975 ಇದರ ಅನ್ವಯ ಜಾನುವಾರು ಹತ್ಯೆಗೆ ನಿಷೇಧವಿರುತ್ತದೆ. ಸುಪ್ರೀಂಕೋರ್ಟ್ WP 309:2003 ದಿನಾಂಕ 30/01/2014 ರೈ ತೀರ್ಪಿನ ಆದೇಶ ದಿನಾಂಕ 06/01/2009 WP 1443/2008 ಹಾಗೂ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಜಾನುವಾರುಗಳ ಕುರ್ಬಾನಿಯನ್ನು ಕಟ್ಟುನಿಟ್ಟಾಗಿ ತಡೆಯಬೇಕು..
ಬಕ್ರೀದ್ ಹಬ್ಬದ ಆಚರಣೆ ಮುಗಿಯುವವರೆಗೆ ಸಕಲೇಶಪುರ ನಗರ/ಗ್ರಾಮಾಂತರ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಜಾನುವಾರು ಸಾಗಾಟವಾಗದಂತೆ ಪೋಲಿಸ್ ಚೆಕ್ ಪೋಸ್ಟ್ ಹಾಕಬೇಕು. ಇಸ್ಲಾಂ ಸಮುದಾಯ ಬಹುಸಂಖ್ಯಾತ ಇರುವ ಪ್ರದೇಶಗಳಲ್ಲಿ ಪ್ರಾರ್ಥನ ಮಂದಿರ ಮಸೀದಿಯ ವ್ಯವಸ್ಥಿತ ಪ್ರದೇಶಗಳಲ್ಲಿ ಅಕ್ರಮವಾಗಿ ಜಾನುವಾರು ಶೇಖರಿಸಿ ಇಡದಂತೆ ನಿಗಾ ಇಡಲು ಸಂಬಂಧ ಪಟ್ಟ ಠಾಣೆಗಳಿಗೆ ಸೂಚಿಸಬೇಕು. ಅಕ್ರಮವಾಗಿ ಶೇಖರಿಸಿ ಇಡುವುದು ಹಾಗೂ ಸಾಗಾಟ ಮಾಡಿದರೆ ಜಾನುವಾರು ಹತ್ಯೆ ನಿಷೇಧ ಪ್ರತಿಬಂಧಕ ವಿಧೇಯಕ 2020 ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಕಾರ್ಯಕಾರಣಿ ಸದಸ್ಯರಾದ ರಘು ಸೇರಿದಂತೆ ಬಜರಂಗದಳ ಜಿಲ್ಲಾ ಸಹ ಸಂಚಾಲಕ್ ಕೌಶಿಕ್ ಹೆಚ್.ಎಂ. ತಾಲ್ಲೂಕಿನ ಕಾರ್ಯದರ್ಶಿ ಮಂಜುನಾಥ್ ಕಬ್ಬಿನ ಗದ್ದೆ. ನಡಹಳ್ಳಿ ಶಶಿ. ಸುರೇಂದ್ರ. ಶ್ರೀ ಜಿತ್ ಗೌಡ. ಇತರರಿದ್ದರು.