ಸಕಲೇಶಪುರ:- ವಳಲಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಶ್ರೀ ಮಲ್ಲೇಶ್ವರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದ್ದು, ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ವಳಲಹಳ್ಳಿಯ ಹಿರಿಯೂರು ಕೂಡಿಗೆ ಗ್ರಾಮಸ್ಥರು ಸಕಲೇಶಪುರ ಬಸ್ ಡಿಪೋ ಸಿಬ್ಬಂದಿಗೆ ಮನವಿ ಸಲ್ಲಿಸಿದರು.
ಪ್ರತಿ ದಿನ ಸಕಲೇಶಪುರದಿಂದ ಹೊರಡುವ ಬಸ್ಸು ಹಿರಿಯೂರು ಕೂಡಿಗೆಗೆ ಸಂಜೆ 3 ಗಂಟೆಗೆ ತಲುಪಿ 3 ರಿಂದ 3.30 ವರೆಗೆ ಹಿರಿಯೂರು ಕೂಡಿಗೆ ಬಸ್ ತಂಗುದಾಣದಲ್ಲಿ ಇದ್ದು ನಂತರ 3.30 ರಿಂದ 3.45 ರ ಸುಮಾರಿನಲ್ಲಿ ಬಸ್ ಹೊರಡುತ್ತಿದ್ದು, ಈ ಬಸ್ಸು ಹಿರಿಯೂರು ಕೂಡಿಗೆಯಿಂದ ಹಡ್ಲಳ್ಳಿ, ದೊಡ್ನಳ್ಳಿ ,ಶುಕ್ರವಾರ ಸಂತೆ ಮಾರ್ಗವಾಗಿ ಸಕಲೇಶಪುರ ತಲುಪುತ್ತದೆ. ಆದರೆ ಪ್ರೌಢಶಾಲಾ ಮಕ್ಕಳಿಗೆ ಪ್ರತಿದಿನ ಸಂಜೆ 4 ಗಂಟೆಯ ತನಕ ತರಗತಿ ಇದ್ದು ಈ ಬಸ್ಸಿಗಾಗಿ ವಿದ್ಯಾರ್ಥಿಗಳು ಹಾಗೂ ಈ ಮಾರ್ಗವಾಗಿ ಹೋಗುವ ಶಿಕ್ಷಕರು ಪ್ರತಿ ದಿನ 3:30ಗೆ ಶಾಲೆ ಬಿಟ್ಟು ಈ ಬಸ್ಸಿನಲ್ಲಿ ಹೋಗುವಂತ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ ಈ ಬಸ್ಸು ಬಿಟ್ಟರೆ ವಿದ್ಯಾರ್ಥಿಗಳಿಗೆ ಈ ಮಾರ್ಗವಾಗಿ ಇನ್ನೂ ಸಂಜೆ 7ರ ತನಕ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಬಸ್ ತಂಗುದಾಣ ಕಾಯುವಂತಹ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಪ್ರತಿದಿನ ಅರ್ಧ ಗಂಟೆಯ ತರಗತಿ ಮಿಸ್ ಆಗುತ್ತಿದ್ದು, ಬೇಸರಗೊಂಡ ವಿದ್ಯಾರ್ಥಿಗಳು ತಮ್ಮ ಶಿಕ್ಷಕ ವೃಂದದವರಿಗೆ ತಿಳಿಸಿ, ಶಾಲಾ ಮುಖ್ಯೋಪಾಧ್ಯಾಯರಿಂದ ಮನವಿ ಪತ್ರವನ್ನು ಬರೆಸಿ ವಿದ್ಯಾರ್ಥಿಗಳೆಲ್ಲ ಸಹಿ ಮಾಡುವುದರೊಂದಿಗೆ ಬಿಡುವಿನ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿ ವಿದ್ಯಾಭ್ಯಾಸಕ್ಕೆ ಸಹಾಯವಾಗುವಂತೆ ಮನವಿ ಪತ್ರವನ್ನು ಸಕಲೇಶಪುರ ಡಿಪೋ ಗೆ ತಲುಪಿಸಲು ಗ್ರಾಮಸ್ಥರಿಗೆ ಕೊಡಲಾಯಿತು. ಪ್ರತಿದಿನ ಮೂರು ಮೂವತ್ತಕ್ಕೆ ಹೊರಡುವ ಬಸ್ಸಿನ ವೇಳೆಯನ್ನು ಅರ್ಧ ತಾಸು ವಿಳಂಬ ಮಾಡಿದರೆ ಆ ಮಾರ್ಗವಾಗಿ ಸಂಚರಿಸುವ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸಹಾಯವಾಗುವುದರ ಜೊತೆಗೆ, ತರಗತಿಗಾಗಿ ಬಸ್ ತಪ್ಪಿದರೆ , ಈ ಭಾಗದಲ್ಲಿ ಹೆಚ್ಚು ಕಾಡಾನೆ ಸಮಸ್ಯೆ ಇರುವುದರಿಂದ ಸಂಜೆಯ ತನಕ ವಿದ್ಯಾರ್ಥಿಗಳು ಬಸ್ ತಂಗುದಾಣದಿಂದ ಮನೆಗೆ ಹೋಗಲು ತೊಂದರೆಯಾಗುವುದರಿಂದ ಕೂಡಲೇ ಅಧಿಕಾರಿಗಳು ಹಾಗೂ ಶಾಸಕರು ಗಮನಹರಿಸುವುದರ ಮುಖಾಂತರ ಬಸ್ ವ್ಯವಸ್ಥೆಯನ್ನು ಸರಿಯಾದ ಸಮಯಕ್ಕೆ ಹೊಂದಾಣಿಕೆ ಮಾಡಿಕೊಡಬೇಕಾಗಿ ವಿನಂತಿ ಮಾಡಿಕೊಂಡರು. ಈ ವೇಳೆ ಸಾಮಾಜಿಕ ಹೋರಾಟಗಾರ ಹಿರಿಯೂರು ಕೂಡಿಗೆಯ ಎಚ್.ಎಸ್ ದಿನೇಶ್, ಸಮಾಜ ಸೇವಕರಾದ ವಳಲಹಳ್ಳಿ ಅಂಬರೀಶ್ , ಉದ್ಯಮಿ ಹಾಗೂ ಸಮಾಜ ಸೇವಕರಾದ ಕರಡಿಗಾಲ ಮುರುಳಿ , ಭರತ್,ಹಾಗೂ ಜೆಡಿಎಸ್ ಮುಖಂಡರಾದ ವಳಲಹಳ್ಳಿ ವಿಶ್ವ , ರಮೇಶ್ ಇದ್ದರು.