Sunday, November 24, 2024
Homeಸುದ್ದಿಗಳುದೇಶದೇಶದ ಹಲವಡೆ ಪಿಎಫ್​ಐ ಕಚೇರಿಗಳ ಮೇಲೆ ಎನ್​ಐಎ, ಇಡಿ ದಾಳಿ:

ದೇಶದ ಹಲವಡೆ ಪಿಎಫ್​ಐ ಕಚೇರಿಗಳ ಮೇಲೆ ಎನ್​ಐಎ, ಇಡಿ ದಾಳಿ:

ನವದೆಹಲಿ: ಪಾಪುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ) ಸಂಘಟನೆ ಪಾಲಿಗೆ ಇಂದು ಕರಾಳ ದಿನವಾಗಿದೆ. ರಾಷ್ಟ್ರೀಯ ತನಿಖಾ ಆಯೋಗ(ಎನ್​ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಆಂಧ್ರ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಇತರ ರಾಜ್ಯಗಳ ಪಿಎಫ್​ಐ ಕಚೇರಿ ಹಾಗೂ ಮುಖಂಡರ ಮನೆಗಳ ಮೇಲಿ ಗುರುವಾರ (ಸೆ. 22) ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು, ವಿವಿಧ ಪ್ರಕರಣಗಳ ಅಡಿಯಲ್ಲಿ 100 ಕ್ಕೂ ಹೆಚ್ಚು ಪಿಎಫ್​ಐ ಸದಸ್ಯರು ಮತ್ತು ಅವರ ಸಂಪರ್ಕದಲ್ಲಿರುವವರನ್ನು ಇಡಿ, ಎನ್​ಐಎ ಮತ್ತು ಆಯಾ ರಾಜ್ಯದ ಪೊಲೀಸರು ಬಂದಿಸಿದ್ದಾರೆ. ದೇಶದ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಂಧನ ನಡೆದಿರುವ ಬಗ್ಗೆ ಮಾಹಿತಿ ಬಂದಿದೆ.

ಇದುವರೆಗಿನ ಅತಿ ದೊಡ್ಡ ತನಿಖಾ ದಾಳಿ ಇದಾಗಿದೆ. ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹ, ತರಬೇತಿ ಶಿಬಿರಗಳ ಆಯೋಜನೆ, ನಿಷೇಧಿತ ಸಂಸ್ಥೆಗಳಿಗೆ ಸೇರಲು ಜನರ ಮನವೊಲಿಸುವುದು ಮತ್ತು ಉಗ್ರರೊಂದಿಗೆ ಸಂಪರ್ಕ ಸೇರಿದಂತೆ ಇನ್ನಿತರ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಆರೋಪದ ಮೇಲೆ ದಾಳಿ ನಡೆದಿದ್ದು, ಪಿಎಫ್​ಐ ಕಚೇರಿ ಮತ್ತು ಆವರಣಗಳಲ್ಲಿ ತನಿಖಾ ಸಂಸ್ಥೆಯಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಮಂಗಳೂರಿನಲ್ಲೂ ದಾಳಿ
ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಇರುವ ಪಿಎಫ್ಐ ಮತ್ತು ಎಸ್​ಡಿಪಿಐ ಕಚೇರಿ ಮೇಲೆ ಮುಂಜಾನೆ ಸುಮಾರು 3.30ರ ವೇಳೆ ಎನ್​ಐಎ ದಾಳಿ ಮಾಡಿದೆ. ದಾಳಿಗೂ ಮುನ್ನ ಸ್ಥಳದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ, ನಂತರ ಎನ್ಐಎ ದಾಳಿ ಮಾಡಿದ್ದು, ಕಡತಗಳ ಪರಿಶೀಲನೆ ಸೇರಿದಂತೆ ತನಿಖೆಯನ್ನು ಚುರುಕುಗೊಳಿಸಿದೆ. ಇದರ ನಡುವೆ ಎನ್ಐಎ ದಾಳಿಯನ್ನು ಖಂಡಿಸಿ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂಜಾಗ್ರತ ಕ್ರಮವಾಗಿ ಪೊಲೀಸರು ನೆಲ್ಲಿಕಾಯಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದ್ದಾರೆ. ಅರೆಮೀಸಲು ಪಡೆ ಕೂಡ ಭಾರೀ ಕಟ್ಟೆಚ್ಚರ ವಹಿಸಿದೆ. ಪಿಎಫ್ಐ, ಎಸ್ ಡಿಪಿಐ ಮುಖಂಡರ ಮನೆ ಮೇಲೆಯು ದಾಳಿ ನಡೆದಿದೆ. ಪಿಎಫ್ಐ ನಾಯಕರಾದ ಶರೀಫ್ ಬಜ್ಪೆ, ಅಶ್ರಫ್ ಜೋಕಟ್ಟೆ, ಮೊಯಿದಿನ್ ಹಳೆಯಂಗಡಿ, ನವಾಝ್ ಕಾವೂರು ಹಾಗೂ ಖಾದರ್ ಕುಳಾಯಿ ಮನೆ ಸೇರಿದಂತೆ ಒಟ್ಟು ಎಂಟು ಕಡೆಗಳಲ್ಲಿ ಎನ್ಐಎ ದಾಳಿ ಮಾಡಿದೆ.

RELATED ARTICLES
- Advertisment -spot_img

Most Popular