ಸಕಲೇಶಪುರ : ತಾಲ್ಲೂಕಿನ ವಿವಿದ ಗ್ರಾಪಂ ಕಚೇರಿಗಳಲ್ಲಿ ವಿದ್ಯುನ್ಮಾನ ಮತಯಂತ್ರ ಹಾಗೂ ಮತದಾನ ಖಾತ್ರಿ ಯಂತ್ರಗಳ ಕಾರ್ಯವೈಖರಿ ಕುರಿತು ಪ್ರಾತ್ಯಕ್ಷಿಕೆ ನಡೆಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಆನೆಮಹಲ್ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇವಿಎಂ ಹಾಗೂ ವಿವಿ ಪ್ಯಾಟ್ ಕುರಿತು ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರಿಗೆ ಮತ ಚಲಾಯಿಸುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇವಿಎಂ ಬಳಕೆ ಹಾಗೂ ವಿವಿ ಪ್ಯಾಟ್ ಕಾರ್ಯವೈಖರಿ ಕುರಿತು ಯಾರಲ್ಲಾದರೂ ಅನುಮಾನ, ಗೊಂದಲ ಇದ್ದರೆ ಅದನ್ನು ಬಗೆಹರಿಸಿ ವಿಶ್ವಾಸ ಮೂಡಿಸಲು ಈ ಪ್ರಾತ್ಯಕ್ಷತೆ ಹಮ್ಮಿಕೊಳ್ಳಲಾಗಿದೆ ಎಂದರು.
ತಾಲ್ಲೂಕಿನಲ್ಲಿ ಒಟ್ಟು ಒಂಬತ್ತು ತಂಡಗಳನ್ನು ರಚಿಸಿ ತಾಲ್ಲೂಕಿನ ಎಲ್ಲಾ ಮತಗಟ್ಟೆಗೆ ಮತ್ತು ಗ್ರಾಪಂ ಬೇಟಿ ನೀಡಿ ಮತದಾನದ ಅರಿವು ಮೂಡಿಸುವುದು ಮತ್ತು ಕಳೆದ ಬಾರಿ ಶೇ72%ಕ್ಕಿಂತ ಕಡಿಮೆ ಮತದಾನವಾದ ಮತಗಟ್ಟೆ ಪ್ರದೇಶದಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸುವಂತಹ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.