ಶಿರಾಡಿ ಸುರಂಗಮಾರ್ಗ ಕಾರ್ಯಗತಕ್ಕೆ ಕಾಂಗ್ರೆಸ್ ಮುಖಂಡ ಜಾನೆಕೆರೆ ಯೋಗಾನಂದ ಮನವಿ
ಸಕಲೇಶಪುರ: ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ರವರ ಕನಸಿನ ಕೂಸಾದ ತಾಲೂಕಿನ ಮಾರನಹಳ್ಳಿಯಿಂದ ಗುಂಡ್ಯದವರೆಗಿನ ಶಿರಾಡಿ ಘಾಟಿನ ಸುರಂಗ ಮಾರ್ಗ ಯೋಜನೆಯನ್ನು ಕಾರ್ಯಗತಗೊಳಿಸಲು ಕೋರಿ ಕಾಂಗ್ರೆಸ್ ಮುಖಂಡ ಜಾನೆಕೆರೆ ಯೋಗಾನಂದ ನೇತೃತ್ವದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳೆ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದ ರಾಜಧಾನಿ ಬೆಂಗಳೂರಿನಿಂದ ವಾಣಿಜ್ಯ ನಗರ ಕಡಲ ಕಿನಾರೆ ಮಂಗಳೂರನ್ನು ಸಂಪರ್ಕಿಸುವ ಪ್ರಮುಖ ರಸ್ತೆ ರಾಷ್ಟ್ರೀಯ ಹೆದ್ದಾರಿ 75 ಆಗಿದ್ದು ಆದರೆ ಮಳೆಗಾಲದಲ್ಲಿ ಸಕಲೇಶಪುರದಿಂದ ಗುಂಡ್ಯದವರೆಗೆ ಅಲ್ಲಲ್ಲಿ ಭೂಕುಸಿತ ಉಂಟಾಗಿ ಭಾರಿ ವಾಹನಗಳ ಸಂಚಾರ ನಿಷೇದ ರದ್ದಾಗುವುದು ಪ್ರತಿವರ್ಷ ಸಾಮಾನ್ಯವಾಗಿದೆ. ಇದರಿಂದ ಸುತ್ತುಬಳಸು ಮಾರ್ಗದಲ್ಲಿ ಭಾರಿ ವಾಹನಗಳ ಚಾಲಕರು ಸಂಚರಿಸಬೇಕಾಗಿದ್ದು ಆರ್ಥಿಕತೆಗೆ ತೀವ್ರ ಪೆಟ್ಟು ಬೀಳುತ್ತಿದೆ. ಈ ಹಿನ್ನೆಲೆಯಲ್ಲಿ ಮಾಜಿ ಕೇಂದ್ರ ಸಚಿವ ದಿ. ಆಸ್ಕರ್ ಫರ್ನಾಂಡಿಸ್ ಸುರಂಗ ಮಾರ್ಗ ಮಾಡಲು ಯೋಜಿಸಿದ್ದರು. ಆದರೆ ಇದು ಕನಸಾಗಿಯೆ ಉಳಿದಿದ್ದು ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸುರಂಗ ಮಾರ್ಗವನ್ನು ಮಾಡಲು ಕ್ರಮ ಕೈಗೊಳ್ಳಬೇಕೆಂದು ಯೋಗಾನಂದರವರು ಮನವಿ ಮಾಡಿದ್ದಾರೆ. ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಚಂದ್ರಶೇಖರ್, ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡ ಸಂತೋಷ್ ಕುಲಾಲ್ ಹಾಜರಿದ್ದರು.