ಬೆಂಗಳೂರು: ‘ಪೇಸಿಎಂ’ ಪೋಸ್ಟರ್ ಅಂಟಿಸಿದ್ದ ಪ್ರಕರಣ ಸಂಬಂಧ ಐವರು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ವಿರುದ್ಧ ಕೆಂಡಾಮಂಡಲವಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾಳೆ(ಶುಕ್ರವಾರ) ಕಾಂಗ್ರೆಸ್ನ ಎಲ್ಲ ಎಂಎಲ್ಎ ಮತ್ತು ಎಂಎಲ್ಸಿಗಳು ಸರ್ಕಾರಿ ಕಟ್ಟಡಗಳ ಮೇಲೆ ಪೇಸಿಎಂ ಪೋಸ್ಟರ್ ಅಂಟಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.
ನಾಳೆ ಸರ್ಕಾರಿ ಕಟ್ಟಡಗಳ ಮೇಲೆ ಪೇಸಿಎಂ ಪೋಸ್ಟರ್ ಅಂಟಿಸುತ್ತೇವೆ. ಬಿಜೆಪಿಯವರು ಅಧಿಕಾರ ದುರ್ಬಳಕೆ, ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ರಾತ್ರೋರಾತ್ರಿ ಅರೆಸ್ಡ್ ಮಾಡಿರುವುದನ್ನು ಖಂಡಿಸುತ್ತೇನೆ. ಬಿಬಿಎಂಪಿಯವರಿಗೆ ಕಣ್ಣಿಲ್ವಾ? ಜನೋತ್ಸವದ್ದು ಅಷ್ಟೊಂದು ಪೋಸ್ಟರ್ ಹಾಕಿಲ್ವಾ? ಮುನಿರತ್ನ, ಸುಧಾಕರ್ ಎಲ್ಲರೂ ಪೋಸ್ಟರ್ ಹಾಕಿಲ್ವಾ? ಇದರ ವಿರುದ್ಧ ಬಿಬಿಎಂಪಿ ಯಾಕೆ ಕೇಸ್ ಹಾಕಿಲ್ಲ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಪೇಸಿಎಂ ಪೋಸ್ಟರ್ ಹಾಕಿದ ಬಳಿಕ ಬಿಜೆಪಿಯವರು ನನ್ನ ಮತ್ತು ಸಿದ್ದರಾಮಯ್ಯರ ಫೋಟೋವನ್ನೂ ಪೋಸ್ಟರ್ ಮಾಡಿದ್ದಾರೆ. ಶೇ.40 ಕಮಿಷನ್ ಸರ್ಕಾರ ಎಂದು ನಾವು ಆರೋಪ ಮಾಡಿದ್ದೇವಾ? ಭ್ರಷ್ಟಾಚಾರ ವಿಚಾರವಾಗಿ ಬೊಮ್ಮಾಯಿ ಸರ್ಕಾರದ ವಿರುದ್ಧ ವಿವಿಧ ರೀತಿಯಲ್ಲಿ ಜನರಿಗೂ ವಿಚಾರ ಮುಟ್ಟಿಸಬೇಕಾಗುತ್ತದೆ. ಹೀಗಾಗಿ ಈ ರೀತಿ ಮಾಡಲಾಗಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಇದು ಆರೋಗ್ಯಕರ ರಾಜಕೀಯ. ನಾಳೆ ನಾವು ಸರ್ಕಾರಿ ಕಟ್ಟಡಗಳ ಮೇಲೆ ಪೇಸಿಎಂ ಪೋಸ್ಟರ್ ಅಂಟಿಸುತ್ತೇವೆ ಎಂದು ಡಿಕೆಶಿ ಹೇಳಿದರು