ಮೂವರು ವಿದ್ಯಾರ್ಥಿಗಳು ನಾಪತ್ತೆ ಪ್ರಕರಣ ಸುಖಾಂತ್ಯ: ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಪೊಲೀಸರಿಗೆ ಪತ್ತೆಯಾದ ವಿದ್ಯಾರ್ಥಿಗಳು
ಸಕಲೇಶಪುರ : ತಾಲೂಕಿನ ಬೆಳಗೋಡು ಹೋಬಳಿ ಕುನಿಗನಹಳ್ಳಿ ಗ್ರಾಮದ ಆದರವಳ್ಳಿ ಸರ್ಕಾರಿ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.
ಶಾಲೆಗೆ ತೆರಳುವದಾಗಿ ಬುಧುವಾರ ಮನೆಯಿಂದ ಹೊರ ಬಂದಿದ್ದ ವಿದ್ಯಾರ್ಥಿಗಳು ಶಾಲೆಗೂ ತೆರಳದೆ ಮನೆಗೂ ವಾಪಸ್ ಆಗದೆ ನಾಪತ್ತೆಯಾಗಿದ್ದರು. ಈ ಕುರಿತಂತೆ ಆತಂಕಕ್ಕೆಗಿಡಾಗಿದ್ದ ಪೋಷಕರು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳೆದ ರಾತ್ರಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ವಿದ್ಯಾರ್ಥಿಗಳ ಪತ್ತೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ತಂಡ ರಚಿಸಿ ಬುಧುವಾರ ರಾತ್ರಿಯೇ ಕಾರ್ಯಚರಣೆಗಿಳಿದ ಪೊಲೀಸರು ಹಾಸನ,ಮೈಸೂರು ಸೇರಿದಂತೆ ರಾಜಧಾನಿ ಬೆಂಗಳೂರಿನಲ್ಲಿ ಕೂಡ ವಿದ್ಯಾರ್ಥಿಗಳ ಪತ್ತೆಗೆ ಬಲೆ ಬೀಸಿದ್ದರು.ಗುರುವಾರ ಬೆಳಿಗ್ಗೆ ಮೂರು ವಿದ್ಯಾರ್ಥಿಗಳು ಮೈಸೂರಿನಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮೈಸೂರಿಗೆ ತೆರಳುವ ವೇಳೆಗೆ ಮೂವರು ವಿದ್ಯಾರ್ಥಿಗಳು ನಮ್ಮ ಹಿಂದೆ ಪೊಲೀಸರು ಬೆನ್ನು ಬಿದ್ದಿರುವ ವಿಷಯ ತಿಳಿದು ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಇದರ ಮಾಹಿತಿ ಪಡೆದ ಪೊಲೀಸರು ಬೆಂಗಳೂರಿಗೆ ತೆರಳಿ ಗುರುವಾರ ರಾತ್ರಿ 11:30 ರ ಸಮಯದಲ್ಲಿ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಓರ್ವ ವಿದ್ಯಾರ್ಥಿ ಪತ್ತೆ ಹಚ್ಚಿದ್ದಾರೆ. ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇನ್ನಿಬ್ಬರು ವಿದ್ಯಾರ್ಥಿಗಳು ಅವರ ಸಂಬಂಧಿಕರ ಮನೆಯಲ್ಲಿ ಇರುವುದಾಗಿ ತಿಳಿದು ಬಂದಿದೆ. ಒಟ್ಟಾರೆಯಾಗಿ ಮೂರು ವಿದ್ಯಾರ್ಥಿಗಳ ನಾಪತ್ತೆ ಪ್ರಕರಣ ಇಡೀ ಜಿಲ್ಲೆಯನ್ನೇ ತಲ್ಲಣಗೊಳಿಸಿತ್ತು. ದೂರು ದಾಖಲಿಸಿಕೊಂಡು ತಕ್ಷಣವೇ ಕಾರ್ಯ ಕಾರ್ಯಪ್ರವೃತ್ತರಾದ ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ . ಇತ್ತ ವಿದ್ಯಾರ್ಥಿಗಳು ಪತ್ತೆಯಾಗಿದ್ದರಿಂದ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಸಕಲೇಶಪುರ ವಿಭಾಗದ ಉಪ ಅಧೀಕ್ಷಕರಾದ ಪ್ರಮೋದ್ ಕುಮಾರ್, ವೃತ ನಿರೀಕ್ಷಕ ನಿರಂಜನ್ ಕುಮಾರ್ ನೇತೃತ್ವದಲ್ಲಿ ಪಿಎಸ್ಐ ಸದಾಶಿವ ತಿಪ್ಪಾರೆಡ್ಡಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚುವುಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.