ಚನ್ನರಾಯಪಟ್ಟಣ: ದೇಶದ 75 ನಗರದಲ್ಲಿ ಸುಕನ್ಯಾ ಸಮೃದ್ಧಿ ಮಹೋತ್ಸವ ಆಚರಣೆ ಮಾಡುತ್ತಿದ್ದು, ರಾಜ್ಯದಲ್ಲಿ ನಾಲ್ಕು ನಗರದಲ್ಲಿ ಮಾತ್ರ ಆಚರಣೆ ಮಾಡಲಾಗುತ್ತಿದೆ. ಇದರಲ್ಲಿ ಚನ್ನರಾಯಪಟ್ಟಣವೂ ಸೇರಿರುವುದು ಹೆಮ್ಮೆಯ ವಿಷಯ ಎಂದು ಶಾಸಕ ಸಿ ಎನ್ ಬಾಲಕೃಷ್ಣ ಹರ್ಷ ವ್ಯಕ್ತಪಡಿಸಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಅಂಚೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸುಕನ್ಯಾ ಸಮೃದ್ಧಿ ಮಹೋತ್ಸವ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿ ಮಾತನಾಡಿ ಸುಕನ್ಯಾ ಸಮೃದ್ಧಿ ಯೋಜನೆಯು ಹೆಣ್ಣು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ರೂಪಿಸಲ್ಪಟ್ಟ ಒಂದು ವಿಶಿಷ್ಟ ಯೋಜನೆಯಾಗಿದ್ದು ಉನ್ನತ ವಿದ್ಯಾಭ್ಯಾಸ ಮತ್ತು ಮದುವೆಯ ಸಂದರ್ಭಗಳಲ್ಲಿ ಆರ್ಥಿಕವಾಗಿ ನೆರವಾಗುತ್ತದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಒಡಂಬಡಿಕೆ ಮಾಡಿಕೊಂಡು ಕೇಂದ್ರ ಸರಕಾರದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ತಾಲೂಕಿನಲ್ಲಿ 65 ಸಾವಿರ ಮಂದಿ ಸುಕನ್ಯಾ ಸಮೃದ್ಧಿ ಯೋಜನೆ ಫಲಾನುಭವಿಗಳು ಅಂಚೆ ಇಲಾಖೆಯಲ್ಲಿ ಖಾತೆ ತೆರೆದು 201 ಕೋಟಿ ಹಣ ಹೂಡಿಕೆ ಮಾಡಿದ್ದು ಹೆಮ್ಮೆಯ ವಿಷಯ ಪೋಷಕರು ಹೆಣ್ಣುಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಅಂಚೆ ಇಲಾಖೆಗಳಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಆಸ್ಪತ್ರೆಗಳಲ್ಲಿ ಜನಿಸುವ ಹೆಣ್ಣುಮಕ್ಕಳ ವಿವರವನ್ನು ಅಂಚೆ ಇಲಾಖೆಯೊಂದಿಗೆ ಹಂಚಿಕೊಂಡರೆ ಪೋಷಕರನ್ನು ಸಂಪರ್ಕಿಸಿ ಯೋಜನೆ ವ್ಯಾಪ್ತಿಗೊಳಪಡಿಸಲು ಸಹಕಾರಿಯಾಗಲಿದೆ. ಸುಕನ್ಯಾ ಸಮೃದ್ಧಿ ಉಳಿತಾಯ ಖಾತೆ ಸರ್ಕಾರಿ ಪ್ರಾಯೋಜಿತ ಯೋಜನೆಯಾಗಿದ್ದು. ಭಾರತದ ಯಾವುದೇ ಅಂಚೆ ಕಛೇರಿ ಹಾಗು ಕೆಲವು ಅಂಗೀಕೃತ ಬ್ಯಾಂಕ್ ಗಳಲ್ಲಿ ಖಾತೆ ತೆರೆಯಲು ಅವಕಾಶವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಅಂಚೆ ಇಲಾಖೆ ನಿರ್ದೇಶಕಿ ಕಯಾ ಆರೋರ ಮಾತನಾಡಿ ಹೆಣ್ಣು ಮಗು ಹುಟ್ಟಿದಂದಿನಿಂದ ಅದಕ್ಕೆ ಹತ್ತು ವರ್ಷ ತುಂಬುವ ವರೆಗೆ ಯಾವಾಗ ಬೇಕಾದರೂ ಸುಕನ್ಯ ಸಮೃದ್ಧಿ ಯೋಜನೆಯ ಖಾತೆ ತೆರೆಯಬಹುದು. ಒಂದು ಮಗುವಿಗೆ ಕೇವಲ ಒಂದೇ ಖಾತೆ ತೆರೆಯಲು ಅವಕಾಶವಿದೆ. ಅವಳಿ ಜವಳಿ ಹೆಣ್ಣು ಮಕ್ಕಳಾದ ಸಂಧರ್ಭಗಳಲ್ಲೂ ಒಂದೊಂದು ಮಗುವಿಗೂ ಒಂದು ಖಾತೆ ಹೊಂದಲು ಅವಕಾಶವಿದೆ. ಖಾತೆ ತೆರೆದ ನಂತರ ಪೋಷಕರು ಕನಿಷ್ಠ ಪ್ರತೀ ವರ್ಷ 250 ರೂಪಾಯಿಗಳನ್ನು ಖಾತೆಗೆ ತುಂಬಬೇಕು. ಗರಿಷ್ಠ 1,50,000.ರೂ.ಗಳನ್ನು ಖಾತೆಗೆ ತುಂಬಬಹುದು . .
ಹೆಣ್ಣು ಮಗು ಹತ್ತು ವರ್ಷ ಪೂರೈಸಿದ ನಂತರ ಆಕೆಯೇ ಆ ಖಾತೆಯನ್ನು ನಿಭಾಯಿಸಬಹುದು. ಹೆಣ್ಣು ಮಗುವಿಗೆ ಹದಿನೆಂಟು ವರ್ಷಗಳು ತುಂಬಿದ ಬಳಿಕ ಖಾತೆಯಲ್ಲಿ ಇರುವ ಹಣದ ಶೇ.50ಹಣವನ್ನು ಶೈಕ್ಷಣಿಕ ಖರ್ಚುಗಳಿಗೆ ಪಡೆಯಲು ಅವಕಾಶವಿದೆ. ಈ ಖಾತೆಯು ಹೆಣ್ಣು ಮಗುವಿಗೆ ಇಪ್ಪತ್ತೊಂದು ವರ್ಷಗಳು ತುಂಬಿದಾಗ ಪರಿಪೂರ್ಣವಾಗುತ್ತದೆ. ಆಗ ಆ ಖಾತೆಯನ್ನು ಮುಕ್ತಾಯ ಮಾಡಬೇಕು. ಮುಕ್ತಾಯ ಮಾಡದಿದ್ದ ಪಕ್ಷದಲ್ಲಿ ಆ ಖಾತೆಯಲ್ಲಿರುವ ಹಣಕ್ಕೆ ಮುಂದೆ ಯಾವುದೇ ಬಡ್ಡಿಯನ್ನು ನೀಡಲಾಗುವುದಿಲ್ಲ. ಹೆಣ್ಣು ಮಗುವಿಗೆ ಹದಿನೆಂಟು ವರ್ಷ ತುಂಬಿದ್ದು ಮದುವೆಯಾಗಿಹೋದರೆ ಆ ಮಗುವಿನ ಖಾತೆಯನ್ನು ಮುಕ್ತಾಯ ಮಾಡಬಹುದು.ಖಾತೆ ತೆರೆದು 21 ವರ್ಷದ ಬಳಿಕ ಮೆಚ್ಯೂರಿಟಿಯಾಗುತ್ತದೆ. ಉತ್ತಮ ಬಡ್ಡಿ ಸಿಗುವುದರ ಜೊತೆಗೆ ಯಾವುದೇ ಪೋಸ್ಟ್ ಆಫೀಸ್, ಅಥವ ಪ್ರತಿಷ್ಟಿತ ಬ್ಯಾಂಕ್ ನ ಶಾಖೆಗಳಲ್ಲೂ ಈ ಯೋಜನೆಯ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಕರ್ನಾಟಕ ಅಂಚೆ ಇಲಾಖೆ ಪೋಸ್ಟ್ ಮಾಸ್ಟರ್ ಜನರಲ್ ದಾಶ್, ಹಾಸನ ಅಂಚೆ ಇಲಾಖೆ ಅಧೀಕ್ಷಕ ರಮೇಶ್, ಸಹಾಯಕ ಅಧೀಕ್ಷಕ ಕಾಂತರಾಜು, ತಹಸಿಲ್ದಾರ್ ಬಿ ಎಮ್ ಗವಿಂದರಾಜು, ತಾಲ್ಲೂಕು ಪಂಚಾಯಿತಿ ಇಒ ಸುನೀಲ್ ಕುಮಾರ್ ಅನೇಕ ಗಣ್ಯರು ಉಪಸ್ಥಿತರಿದ್ದರು.