ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ, ವಿವಿಧ ಕಾರ್ಯಕ್ರಮಗಳಲ್ಲಿ ವಿಭಿನ್ನ ರೀತಿಯಲ್ಲಿ ನಾಡ ದೇವಿಯ (ಕನ್ನಡಾಂಬೆಯ) ಚಿತ್ರಗಳನ್ನು ಬಳಸುವುದನ್ನು ಗಮನಿಸಿದ ರಾಜ್ಯ ಸರ್ಕಾರ ಇದೀಗ ಕರ್ನಾಟಕ ಮಾತೆಯ ಹೊಸ ಚಿತ್ರವನ್ನು ಅಧಿಕೃತಗೊಳಿಸಿ ಆದೇಶ ಹೊರಡಿಸಿದೆ.
ಕರ್ನಾಟಕದ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಚಿತ್ರವನ್ನು ಐವರು ಕಲಾವಿದರ ಸಮಿತಿಯ ಒಪ್ಪಿಗೆ ಮೇರೆಗೆ ಅಧಿಕೃತಗೊಳಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶಿಸಿದೆ. ಇನ್ನು ಮುಂದೆ ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ, ಶಾಲಾ ಕಾಲೇಜುಗಳ ಗೋಡೆಯ ಮೇಲೆ ಈ ಚಿತ್ರವನ್ನೇ ಕಡ್ಡಾಯವಾಗಿ ಬಳಸುವಂತೆ ತಿಳಿಸಲಾಗಿದೆ.
ಅಧಿಕೃತ ಚಿತ್ರದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಕಲೆಯನ್ನು ಬಿಂಬಿಸುವ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ.