ಸಕಲೇಶಪುರ: ಪಟ್ಟಣದ ಕುಡುಗರಹಳ್ಳಿ ಬಡಾವಣೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ (ನ್ಯಾಕ್) ತಂಡದ ರಾಷ್ಟ್ರೀಯ ಸದಸ್ಯರು ಕಾಲೇಜಿನ ಗುಣಮಟ್ಟದ ಕುರಿತು ಬುಧವಾರ ಮೌಲ್ಯಮಾಪನ ನಡೆಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ತಂಡದ ಮುಖ್ಯಸ್ಥೆ ಡಾ.ಶುಕ್ಲಾ ಮಹಲ್ಟಿ, ವೈಸ್ ಚಾನ್ಸೆಲರ್, ಕೊಲ್ಹನ್ ಯೂನಿವರ್ಸಿಟಿ, ಜಾರ್ಖಂಡ್, ಸದಸ್ಯರಾದ ಡಾ.ಗುರ್ಮೀತ್ ಸಿಂಗ್ ಸಿದು, ಪ್ರೊಪೆಷರ್, ಪಂಜಾಬಿ ಯೂನಿವರ್ಸಿಟಿ, ಡಾ.ಚಾಯ್‌ತನ್ಯ ಬೋರಾ, ಪ್ರಾಂಶುಪಾಲರು, ಟಿಂಸುಕಿಯಾ ಕಾಮರ್ಸ್ ಕಾಲೇಜು, ಅಸ್ಸಾಂರವರುಗಳನ್ನು ಒಳಗೊಂಡ ಮೂವರು ಸದಸ್ಯರ ತಂಡ ಶೈಕ್ಷಣಿಕ ಮೌಲ್ಯಮಾಪನಕ್ಕಾಗಿ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನಲ್ಲಿ ಇರುವ ಸೌಲಭ್ಯ ಹಾಗೂ ಕಟ್ಟಡದ ಪರಿಶೀಲನೆ ಮಾಡಿದರು. ಅಲ್ಲದೆ ಕಾಲೇಜಿನಲ್ಲಿರುವ ಎಲ್ಲಾ ಬೋಧಕರು ಹಾಗೂ ವಿದ್ಯಾರ್ಥಿಗಳಿಂದ ಸದಸ್ಯರು ಕಾಲೇಜಿನ ಕುರಿತು ವಿಷಯ ಸಂಗ್ರಹ ಮಾಡಿದರು. ವಿದ್ಯಾರ್ಥಿಗಳ ಪೋಷಕರ ಜೊತೆಗೆ ಈ ತಂಡವು ಸಂವಾದ ನಡೆಸಿತು. ಬಹುತೇಕ ಪೋಷಕರು ಕಾಲೇಜಿನಲ್ಲಿ ಎಲ್ಲಾ ಸೌಲಭ್ಯಗಳು ಉತ್ತಮವಾಗಿದ್ದು ಮುಂದಿನ ದಿನಗಳಲ್ಲಿ ಸ್ನಾತಕೋತರ ಪದವಿ ತರಗತಿಗಳನ್ನು ತೆರೆಯುವಂತೆ ಮನವಿ ಮಾಡಿದರು.
ನ್ಯಾಕ್ ಸದಸ್ಯರ ಭೇಟಿ ಹಿನ್ನೆಲೆಯಲ್ಲಿ ಕಾಲೇಜನ್ನು ವಿಶೇಷ ಅಲಂಕಾರ ಮಾಡಲಾಗಿತ್ತು. ವಿದ್ಯಾರ್ಥಿಗಳಿಂದ ಸಂಜೆಯ ವೇಳೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನ್ಯಾಕ್ ಸದಸ್ಯರ ಕಾಲೇಜು ಭೇಟಿ ಹಿನ್ನೆಲೆಯಲ್ಲಿ ಕನ್ನಡ ಪ್ರೊಪೆಷರ್ ಅಶೋಕ್, ಹಾಸನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಚೇತನ್‌ರವರ ತಂಡ ಕಳೆದ 15 ದಿನಗಳಿಂದ ಕಾಲೇಜಿನಲ್ಲಿ ವಿಶೇಷ ಸಿದ್ದತೆ ನಡೆಸಿತ್ತು.
ಈ ಸಂಧರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಹರೀಶ್, ಕಾಲೇಜಿನ ಹಳೇ ವಿದ್ಯಾರ್ಥಿ ಕೃಷ್ಣೇಗೌಡ, ಪುರಸಭಾ ಅಧ್ಯಕ್ಷ ಕಾಡಪ್ಪ, ಪುರಸಭಾ ಸದಸ್ಯರುಗಳಾದ ಉಮೇಶ್, ಮುಖೇಶ್ ಶೆಟ್ಟಿ, ಮೋಹನ್, ಅಣ್ಣಪ್ಪ, ಜ್ಯೋತಿ, ಜರೀನಾ, ಸರಿತಾ ಸೇರಿದಂತೆ ಇತರರು ಹಾಜರಿದ್ದರು.