ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ – ಶಾಸಕ ಸಿಮೆಂಟ್ ಮಂಜು.
ಸಕಲೇಶಪುರ : ಸರಕಾರದ ಮೂಲಕ ಅನುದಾನ ತಂದು ಎಲ್ಲಾ ನಾಗರಿಕರಿಗೂ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಗುರುವಾರ ತಾಲೂಕಿನ ಬಾಳ್ಳುಪೇಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಾಂಧಿನಗರದಲ್ಲಿ ಎಸ್‌ಇಪಿ,ಟಿಎಸ್‌ಪಿ ಅನುದಾನದಲ್ಲಿ ನೂತನ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ವಿದ್ಯುತ್ ಸೇರಿದಂತೆ ಮೂಲ ಸೌಕರ್ಯ ನೀಡಬೇಕಾದುದು ಜನಪ್ರತಿನಿಧಿಗಳು ಮತ್ತು ಸರ್ಕಾರದ ಕರ್ತವ್ಯ. ನಾನು ಶಾಸಕನಾದ ನಂತರ ಸರ್ಕಾರದಿಂದ ಬರುವ ಅನುದಾನವನ್ನು ಜನಸಾಮಾನ್ಯರಿಗೆ ಒದಗಿಸಲು ಬದ್ಧನಾಗಿದ್ದೇನೆ. ಸರ್ಕಾರದಿಂದ ಬಂದ ಸಣ್ಣಪುಟ್ಟ ಅನುದಾನದಲ್ಲಿ ಕ್ಷೇತ್ರದ ಹೆಚ್ಚು ಅವಶ್ಯಕವಾಗಿರುವ ರಸ್ತೆಗಳ ಪಟ್ಟಿ ಮಾಡಿ ಯಾವುದೇ ತಾರತಮ್ಯ ಮಾಡದೇ ಅಭಿವೃದ್ಧಿಪಡಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಎಸ್‌ಇಪಿ,ಟಿಎಸ್‌ಪಿ ಅನುದಾನದಲ್ಲಿ ತಾಲೂಕಿನಾದ್ಯಂತ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಕುರಿತಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಕಾಮಗಾರಿ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡುವಂತೆ ತಿಳಿಸಲಾಗಿದೆ.ಯಾವುದೇ ಹಂತದಲ್ಲೂ ಕಾಮಗಾರಿಯ ಗುಣಮಟ್ಟದ ಕಳಪೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ ಎಂದರು.
ಇದೆ ವೇಳೆ ಗ್ರಾಮಸ್ಥರು ಸಣ್ಣಪುಟ್ಟ ಶುಭ ಕಾರ್ಯಕ್ರಮ ಹಾಗೂ ಸಭೆ ಸಮಾರಂಭಗಳನ್ನು ನಡೆಸಲು ಸಮುದಾಯ ಭವನ ನಿರ್ಮಿಸಿ ಕೊಡುವಂತೆ ಶಾಸಕರಿಗೆ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲತಾ ಚಂದ್ರು, ಉಪಾಧ್ಯಕ್ಷ ಎಚ್. ಎಂ ಸ್ವಾಮಿ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಗ್ರಾಮ ಪಂಚಾಯತಿ ಸದಸ್ಯರಾದ ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್, ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಹರೀಶ್, ಬಾಳ್ಳುಪೇಟೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಮೆಣಸಮಕ್ಕಿ ಶಿವಕುಮಾರ್, ಪಿಡಿಒ ಹರೀಶ್ ಮುಖಂಡರಾದ ಚಂದ್ರಶೇಖರ್, ಅಣ್ಣಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.