ಬಾಳ್ಳುಪೇಟೆಯಲ್ಲಿ ಶಿವಕುಮಾರ ಸ್ವಾಮಿಗಳ ಪುಣ್ಯ ಸಂಸ್ಮರಣೆ ಕಾರ್ಯಕ್ರಮ.
ಕಾರ್ಯಕ್ರಮದಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಭಾಗಿ.
ಸಕಲೇಶಪುರ : ನಡೆದಾಡಿದ ದೇವರು ತ್ರಿವಿಧ ದಾಸೋಹಿ ಕರ್ನಾಟಕ ರತ್ನ ಡಾ ಶ್ರೀ ಶಿವಕುಮಾರ ಮಹಾಸ್ವಾಮಿಗಳ ನಾಲ್ಕನೇ ವರ್ಷದ ಪುಣ್ಯ ಕಾರ್ಯಕ್ರಮ ಸಂಸ್ಮರಣೆ ಕಾರ್ಯಕ್ರಮ ತಾಲೂಕಿನ ಬಾಳ್ಳುಪೇಟೆಯಲ್ಲಿ ಗುರುವಾರ ಅರ್ಥಪೂರ್ಣವಾಗಿ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆಯ ಕಿರೆಕೊಡ್ಲಿ ಮಠದ ಸದಾಶಿವ ಸ್ವಾಮಿಗಳು ಮಾತನಾಡಿ,
ಹಸಿದ ಹೊಟ್ಟೆಗೆ ಅನ್ನ, ಹಸಿದ ಮನಸ್ಸಿಗೆ ಅಕ್ಷ ರ ದಾಸೋಹ ಹಾಗೂ ತಣಿದ ದೇಹಕ್ಕೆ ಆಸರೆಯ ದಾಸೋಹವನ್ನು ಉಣಬಡಿಸಿದ ಮಹಾನ್ ಯೋಗಿಯ ಶಿವಕುಮಾರ ಸ್ವಾಮಿಗಳಾಗಿದ್ದರು ಎಂದು ಗುಣಗಾನ ಮಾಡಿದರು.
ಕಲ್ಮಠದ ಶ್ರೀಗಳಾದ ಮಹಾಂತ ಸ್ವಾಮಿಗಳು ಮಾತನಾಡಿ,
ಸಿದ್ಧಗಂಗಾ ಮಠ ಇಷ್ಟು ದೊಡ್ಡ ಇತಿಹಾಸ, ಪರಂಪರೆಯನ್ನು ಹೊಂದಲು ಶ್ರೀಗಳ ಸೇವೆಯೇ ಕಾರಣ. ಶ್ರೀಗಳ ಜೀವನವೇ ಒಂದು ಸಂದೇಶ. ಅವರ ಬದುಕು ತೆರೆದ ಪುಸ್ತಕ. ಅವರು ಕಾಯಕ, ದಾಸೋಹ ಹಾಗೂ ಸೇವೆಯನ್ನು ತಮ್ಮ ಜೀವನದ ಉಸಿರಾಗಿಸಿಕೊಂಡು ಬದುಕಿದವರು ಎಂದರು. ಆರ್ಥಿಕ ಸಂಪನ್ಮೂಲ ಕೊರತೆಯಿಂದಾಗಿ ಮಠವನ್ನು ಮುನ್ನಡೆಸಲು ಸಾಧ್ಯವಾಗದಿದ್ದಾಗ ಶ್ರೀಗಳು ಮಂಡಿಪೇಟೆಯಲ್ಲಿ ವರ್ತಕರಿಂದ ಸಾಲ ಮಾಡಿ ಧವಸ ಧಾನ್ಯಗಳನ್ನು ತಂದು ಮಠದ ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಿಸುತ್ತಿದ್ದರು. ವೈಯಕ್ತಿಕ ಹಿತ ಮರೆತು ಸಮಾಜ ಹಾಗೂ ಮಠದ ಹಿತಕ್ಕಾಗಿ ಅತಿ ದೊಡ್ಡ ಸೇವೆಯನ್ನು ಆ ಕಾಲದಿಂದಲೂ ನಡೆಸಿಕೊಂಡು ಬಂದರು. ಅದರ ಫಲವಾಗಿ ಇಂದು ಮಠದಲ್ಲಿ 10 ಸಾವಿರ ಮಕ್ಕಳು ಓದುತ್ತಿದ್ದಾರೆ ಎಂದು ತಿಳಿಸಿದರು.
ಹಾಸನದ ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮಿಗಳು ಮಾತಾನಾಡಿ,ಶತಾಯುಷಿ ಶ್ರೀಗಳು ನಮ್ಮನ್ನು ಭೌತಿಕವಾಗಿ ಅಗಲಿ ಒಂದು ವರ್ಷ ಕಳೆದರೂ ಅವರು ತೋರಿದ ಮಾರ್ಗದಲ್ಲಿ ನಡೆಯುವುದು ನಾವು ಅವರಿಗೆ ಕೊಡುವ ಗೌರವ. ಶ್ರೀಗಳ ಹಾದಿಯಲ್ಲಿ ಮಠ ಹಾಗೂ ಸಮಾಜದ ಸೇವೆಯಲ್ಲಿ ನಾವೆಲ್ಲರೂ ಇನ್ನೂ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿದ ಸಾಲುಮರದ ತಿಮ್ಮಕ್ಕನವರ ಪರವಾಗಿ ಅವರ ಪುತ್ರ ಉಮೇಶ್ ಮಾತನಾಡಿ,ಸಿದ್ಧಗಂಗಾ ಮಠವನ್ನು ಡಾ.ಶಿವಕುಮಾರ ಶ್ರೀಗಳು ಸರ್ವಧರ್ಮ ಸಮನ್ವಯತೆಯ ಕ್ಷೇತ್ರವನ್ನಾಗಿ ಬೆಳೆಸಿದರು. ಅವರಿಗೆ ಅನೇಕ ಪುರಸ್ಕಾರಗಳು ಸಂದಿವೆ. ಆದರೆ ಭಾರತ ರತ್ನ ಲಭಿಸಿಲ್ಲ ಎನ್ನುವ ನೋವಿದೆ. ಶ್ರೀಗಳಿಗೆ ಭಾರತ ರತ್ನ ಪುರಸ್ಕಾರ ನೀಡಬೇಕು ಎಂದು ಒತ್ತಾಯಿಸಿದರು.
ನಾಡಿನ ಅನೇಕ ಮಕ್ಕಳ ಶಿಕ್ಷಣ ಹಾಗೂ ಹಸಿವಿನ ದಾಹವನ್ನು ಶ್ರೀಗಳು ನೀಗಿಸಿದರು. ಶ್ರೀಗಳು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಹಾಗಾಗಿ ಇಂದು ಇಷ್ಟು ದೊಡ್ಡ ಭಕ್ತರ ಸಮುದಾಯವನ್ನು ಗಳಿಸಿದ್ದಾರೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಶ್ರೀ ಶಿವಕುಮಾರ ಮಹಾಸ್ವಾಮಿಗಳ ಭಾವಚಿತ್ರದೊಂದಿಗೆ ಬಾಳ್ಳುಪೇಟೆಯ ರಾಜಭೀದಿಗಳಲ್ಲಿ ವಿವಿಧ ಕಲಾತಂಡದೊಂದಿಗೆ ಮೆರವಣಿಗೆ ನಡೆಸಲಾಯಿತು.ನಂತರ ಸುಮಾರು 5 ಸಾವಿರ ಜನರಿಗೆ ದಾಸೋಹ ಏರ್ಪಡಿಸಲಾಗಿತ್ತು.ಇದೇ ವೇಳೆ ಹಾಸನದ ಜೀವ ರಕ್ಷಾ ರಕ್ತ ನಿಧಿ ಸಹಯೋಗದಲ್ಲಿ 89 ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕ ಎಚ್.ಕೆ ಕುಮಾರಸ್ವಾಮಿ, ಮಾಜಿ ಶಾಸಕ ಬಿ. ಆರ್ ಗುರುದೇವ್,ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದೇವರಾಜ್ (ದಿವಾನ್),ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್, ಗೊರೂರು ವೆಂಕಟೇಶ್ ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್, ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಸಾಗರ್ ಜಾನೇಕೆರೆ, ಸಮಾಜ ಸೇವಕರಾದ ಬಿ. ಎಸ್ ಮಲ್ಲಿಕಾರ್ಜುನ್, ಜಯಪ್ರಕಾಶ್,ಸಿದ್ದೇಶ್ ನಾಗೇಂದ್ರ ಸೇರಿದಂತೆ ಶಿವಕುಮಾರ ಸ್ವಾಮಿಗಳ ಸಂಸ್ಮರಣೋತ್ಸವ ಸಮಿತಿಯ ಎಲ್ಲ ಸದಸ್ಯರು ಇದ್ದರು.