ಸಕಲೇಶಪುರ: ಭವಿಷ್ಯದ ಕುರಿತು ಜನ ಚಿಂತನೆ ಹೊಂದದಿರುವುದು ಸಮಸ್ಯೆಗಳ ಮೂಲವಾಗಿದೆ ಎಂದು ಶ್ರೀ.ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕಸಬಾ, ಹೆಗ್ಗದ್ದೆ, ಬಾಗೆ ವಲಯ , ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜಾ ಸಮಿತಿ, ಪ್ರಗತಿ ಬಂಧು-ಸ್ವಸಹಾಯ ಸಂಘಗಳ ಒಕ್ಕೂಟಗಳು, ಶೌರ್ಯ ವಿಪತ್ತು ನಿರ್ವಹಣಾ ಘಟಕ, ನವ ಜೀವನ ಸಮಿತಿ ವತಿಯಿಂದ ಪಟ್ಟಣದ ಶ್ರೀನಿವಾಸ ಕನ್ವೆನ್ಷನ್ ಸೆಂಟರ್ ನಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,, ಧಾರ್ಮಿಕ ಸಭೆ ಒಕ್ಕೂಟ ಪದಗ್ರಹಣ ಮತ್ತು ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಗ್ರಾಮೀಣ ಭಾಗದ ಜನರ ಏಳಿಗೆಗೆ ನಿರಂತರವಾಗಿ ಶ್ರಮಿಸುತ್ತಿದೆ. ಕಾರ್ಮಿಕ ವರ್ಗದವರು ನಾಳಿನ ಚಿಂತೆ ಮಾಡದೆ ಅಂದು ದುಡಿದ ಹಣವನ್ನು ಅಂದೇ ಖರ್ಚು ಮಾಡುವುದರಿಂದ ಹಲವು ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜನರಲ್ಲಿ ಉಳಿತಾಯ ಕಲ್ಪನೆಯನ್ನು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯೋಜನೆ ಸ್ವಸಹಾಯ ಸಂಘಗಳನ್ನು ರಚಿಸಿ ಅದರ ಮೂಲಕ ಸಾಲಗಳನ್ನು ನೀಡಿ ಜನರನ್ನು ಸ್ವಾವಲಂಬಿಗಳಾಗಿ ಮಾಡುತ್ತಿದೆ. ಅಲ್ಲದೆ ಹಲವಾರು ಯೋಜನೆಗಳನ್ನು ಮಧ್ಯಮ ಹಾಗೂ ಬಡವರ್ಗಗಳ ಏಳಿಗೆಗಾಗಿ ರೂಪಿಸಿದೆ.ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಶ್ರೀ.ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ನ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ್ ನೆಲ್ಲಿತ್ತಾಯ ಮಾತನಾಡಿ ಬಹುತೇಕ ಜನರು ಮದ್ಯವನ್ನು ಹೆಚ್ಚು ಸೇವಿಸುವುದರಿಂದ ಕುಟುಂಬಗಳು ಬೀದಿಗೆ ಬೀಳಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಿರಂತರವಾಗಿ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ, ಜನರು ಮದ್ಯವನ್ನು ತ್ಯಜಿಸುವಂತೆ ಬದಲಾವಣೆ ತರುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ.ನವೀನ್ ಚಂದ್ರಶೆಟ್ಟಿ ವಹಿಸಿದ್ದು, ಕಸಾಪ ತಾಲೂಕು ಅಧ್ಯಕ್ಷೆ ಶಾರದಾ ಗುರುಮೂರ್ತಿ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಮೇಘನ ಜಿ. ಎಸ್.ಎಸ್.ಪಿ ಮಿಥುನ್,ಯೋಜನೆಯ ಜಿಲ್ಲಾ ನಿರ್ದೇಶಕಿ ಮಮತಾ ಹರೀಶ್ ರಾವ್, ಜನ ಜಾಗೃತಿ ವೇದಿಕೆಯ ಮಂಜು ಗಿರೀಶ್, ಉಮಾನಾಥ್ ಕೋಟ್ಯಾನ್, ರಾಮಚಂದ್ರು, ವಲಯ ಮೇಲ್ವಿಚಾರಕಿ ಮೋಹಿನಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7.30ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ ವೇದ್ರ ಬ್ರಹ್ಮಶ್ರೀ ಮಹೇಶ್ ಭಟ್ ಅಧ್ಯಕ್ಷತೆಯಲ್ಲಿ ನಡೆಯಿತು. ನೂರಾರು ದಂಪತಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸಾವಿರಾರು ಮಂದಿಗೆ ಮಧ್ಯಾಹ್ನ ಅನ್ನಸಂತರ್ಪಣೆ ಮಾಡಲಾಯಿತು.