ಜ.26 ರಿಂದ 31ರವರೆಗೆ ಸುತ್ತೂರು ಜಾತ್ರಾ ಮಹೋತ್ಸವ: ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದಿವಾನ್ ದೇವರಾಜ್
ಸಕಲೇಶಪುರ : ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು 2025ರ ಜ 26 ರಿಂದ 31 ರವರೆಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನಿಧ್ಯದಲ್ಲಿ ನಡೆಯಲಿದೆ ಎಂದು ವೀರಶೈವ ಸಮಾಜದ ಮುಖಂಡರಾದ ದಿವಾನ್ ದೇವರಾಜ್ ಹೇಳಿದರು.
ಪಟ್ಟಣದ ಸಕಲೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಸುತ್ತೂರು ಜಾತ್ರಾ ಪ್ರಚಾರ ರಥಕ್ಕೆ ಸ್ವಾಗತಿಸಿ ಮಾತನಾಡಿ, 6 ದಿನಗಳ ಕಾಲ ನಡೆಯುವ ಈ ಜಾತ್ರೆ ಮಹೋತ್ಸವದಲ್ಲಿ ರಥೋತ್ಸವ, ತೆಪ್ಪುೋತ್ಸವ ಹಾಗೂ ಕೆಂಡೋತ್ಸವ ಹಾಗೂ ಲಕ್ಷ ದೀಪೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳು ನಡೆಯಲಿವೆ. ಮಠಾಧೀಶರು, ರಾಜಕಾರಣಿಗಳು, ಸಾಹಿತಿಗಳು, ಸೇರಿದಂತೆ ವಿವಿಧ ಗಣ್ಯರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದರು. ಪ್ರತಿದಿನ 40ರಿಂದ 45 ಸಾವಿರ ಭಕ್ತಾದಿಗಳು ತಂಗಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಸಾರಿಗೆ ಸಂಸ್ಥೆಗಳು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಂದ ಸುತ್ತೂರು ಶ್ರೀ ಸುತ್ತೂರು ಕ್ಷೇತ್ರಕ್ಕೆ ವಿಶೇಷ ಬಸ್ಸುಗಳ ಸೇವೆ ಒದಗಿಸಲಿವೆ ಎಂದರು.
ಮಲೆನಾಡು ವೀರಶೈವ ಸಮಾಜದ ಕಾರ್ಯದರ್ಶಿ ಯಡಹಳ್ಳಿ ಮಂಜುನಾಥ್ ಮಾತನಾಡಿ, ಸುತ್ತೂರು ಮಠಕ್ಕೆ ಬೆಳಗಾರರು ರೈತರ ಬಗ್ಗೆ ವಿಶೇಷ ಕಾಳಜಿ ಇದ್ದು ಪ್ರತಿವರ್ಷ ನಡೆಯುವ ಜಾತ್ರಾ ಮಹೋತ್ಸವದಲ್ಲಿ ರೈತರಿಗೆ ಅರಿವು ನೀಡುವಂತಹ ಕಾರ್ಯಕ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು. ಒಂದು ಎಕರೆ ಪ್ರದೇಶದಲ್ಲಿ ಕೃಷಿ ಬ್ರಹ್ಮಾಂಡವನ್ನು ಮಾಡಿದ್ದು 100ಕ್ಕೂ ಬೆಳೆಗಳನ್ನು ಸಾಧ್ಯವಾದಷ್ಟು ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆಗಳನ್ನು ಬೆಳೆಯುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಭಜನಾ ಮೇಳ, ವಸ್ತು ಪ್ರದರ್ಶನ, ಕೃಷಿಮೇಳ, ಸ್ಥಳದಲ್ಲೇ ಚಿತ್ರ ರಚಿಸುವ ಸ್ಪರ್ಧೆ , ಚಿತ್ರ ಸಂತೆ, ಸೋಬಾನೆ ಪದ, ರಂಗೋಲಿ, ಗಾಳಿಪಟ ಸ್ಪರ್ಧೆ , ಕುಸ್ತಿ ಪಂದ್ಯಾವಳಿ, ದೇಸಿ ಆಟಗಳು, ಸಾರ್ವ ಜನಿಕರಿಗೆ ಗ್ರಾಮೀಣ ಆಟಗಳ ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ಕಲಾ ತಂಡ ಗಳಿಂದ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿವೆ. ಸಾಮೂಹಿಕ ವಿವಾಹವನ್ನೂ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ವೀರಶೈವ ಮುಖಂಡ ಬಿ.ಡಿ ಬಸವಣ್ಣ,
ಸಮಾಜದ ಮುಖಂಡರಾದ ವಿದ್ಯಾಶಂಕರ್, ಆರಾಧ್ಯ, ಟಸ್ಕೆರಿಯ ವಿದ್ಯಾ ಸಂಸ್ಥೆಯ ಗಿರೀಶ್, ಸುರೇಶ್, ಬ್ಯಾಕರವಳ್ಳಿ ವಿಜಯ್ ಕುಮಾರ್, ಕೌಡಳ್ಳಿ ಲೋಹಿತ್, ವೀರಶೈವ ಮಹಿಳಾ ವೇದಿಕೆಯ ಕೋಮಲ ಇನ್ನಿತರರು ಇದ್ದರು.