ಸಕಲೇಶಪುರ: ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ;
ಸಕಲೇಶಪುರ : ಪಟ್ಟಣದ ಕುಡುಗರಹಳ್ಳಿ ಬಡಾವಣೆಯಲ್ಲಿ ಮದರಸದಿಂದ ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ಗುಂಪೊಂದು ದಾಳಿ ಮಾಡಿ ಗಾಯಗೋಳಿಸಿರುವ ಘಟನೆ ಸಂಭವಿಸಿದೆ.
ಶಾಹಿದ್ 13 ನಾಯಿ ದಾಳಿಯಿಂದ ಮುಖ, ಕೈ, ಕಾಲು ಮತ್ತು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗೊಂಡಿರುವ ಬಾಲಕನಾಗಿದ್ದಾನೆ.
ಮದರಸದಿಂದ ಮನೆಗೆ ಹಿಂದಿರುಗುವ ವೇಳೆ ಏಕಾಏಕಿ ಬೀದಿ ನಾಯಿಗಳ ಗುಂಪು ಆತನ ಮೇಲೆ ಒಮ್ಮೆಲೇ ಎರಗಿ, ದೇಹದ ವಿವಿಧ ಭಾಗಗಳನ್ನು ಕಚ್ಚಿ ಗಾಯಗೊಳಿಸಿದೆ. ಬಾಲಕನ ಕಿರುಚಾಟ ಕೇಳಿ ಓಡಿಬಂದ ಸ್ಥಳೀಯರು, ಬೀದಿ ನಾಯಿಗಳಿಂದ ಬಾಲಕನನ್ನು ರಕ್ಷಿಸಿದರು. ಗಾಯಗೊಂಡ ಶಾಹಿದ್‌ನನ್ನು ಕೂಡಲೇ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ಸ್ಥಳೀಯರ ಆಕ್ರೋಶ: ಸಕಲೇಶಪುರ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಬೀದಿ ನಾಯಿಗಳ ದಾಳಿಯಿಂದ ಮಕ್ಕಳು ಮತ್ತು ವಯಸ್ಕರು ಭಯದ ವಾತಾವರಣದಲ್ಲಿ ನಡೆದಾಡುವ ಸ್ಥಿತಿಗೆ ಪುರಸಭೆ ವ್ಯಾಪ್ತಿಯ ನಿವಾಸಿಗಳು ತಲುಪಿದ್ದಾರೆ ಪುರಸಭೆಯ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ದೊಡ್ಡ ಅನಾಹುತ ಸಂಭವಿಸುವ ಮೊದಲು ಬೀದಿ ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.