ಸಕಲೇಶಪುರ : ಜೀತದಾಳುಗಳಾಗಿ ದುಡಿಯುತ್ತಿರುವರನ್ನು ಗುರುತಿಸಿ ಅವರಿಗೆ ಸರಕಾರದ ಸೌಲಭ್ಯ ಕಲ್ಪಿಸಿ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ತಾಪಂ ಕಾರ್ಯನಿರ್ವಾಹಕಾಧಿಕಾರಿ ವೆಂಕಟೇಶ್ ಹೇಳಿದರು.
ಗುರುವಾರ ತಾಪಂ ಅವರಣದಲ್ಲಿ ನಡೆದ ಜೀತ ಪದ್ದತಿ ನಿರ್ಮೂಲನೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕನಿಷ್ಠ ಕೂಲಿ ಇಲ್ಲದೆ ಜೀತದಾಳುಗಳು ಮತ್ತು ಅವರ ಕುಟುಂಬಗಳು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುತ್ತವೆ. ಆದರೆ ಅವರಿಗೆ ಶಿಕ್ಷಣದ ಕೊರತೆಯಿಂದ ಜೀತದಿಂದ ಹೊರಬಂದು ಸರಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇಂಥ ಪ್ರಕರಣಗಳನ್ನು ಗುರುತಿಸಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದಲ್ಲಿ ಸರಕಾರದ ಸೌಲಭ್ಯ ಕಲ್ಪಿಸುವ ಮೂಲಕ ಜೀತ ಮುಕ್ತಗೊಳಿಸಬಹುದು. ಅನೇಕ ಸಾಮಾಜಿಕ ಅನಿಷ್ಠಗಳಂತೆ ಜೀತ ಪದ್ಧತಿಯೂ ಅನಿಷ್ಠ ಪದ್ಧತಿ. ಇದನ್ನು ಹೋಗಲಾಡಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ತಾಪಂ ಸಹಾಯಕ ನಿರ್ದೇಶಕ ಆದಿತ್ಯರವರು ಮಾತನಾಡಿ, ಕರ್ನಾಟಕ ರಾಜ್ಯದಲಿ ಪ್ರತಿ ವರ್ಷ ಫೆಬ್ರವರಿ 9ನೇ ತಾರೀಖನ್ನು ಜೀತ ಪದ್ದತಿ ನರ್ಮೂಲನೆ ದಿನಾಚರಣೆ ಸರಕಾರಿ ಅದೇಶದ ಅನ್ವಯ ಆಚರಣೆ ಮಾಡಲಾಗುತ್ತಿದೆ ಎಂದರು.
ಕನಿಷ್ಠ ಸೌಲಭ್ಯ ನೀಡದೆ ಕಾರ್ಮಿಕನ ಇಚ್ಚೆಗೆ ವಿರುದ್ದವಾಗಿ ದುಡಿಸಿಕೊಳ್ಳುವುದಕ್ಕೆ ಜೀತ ಪದ್ಧತಿ ಎನ್ನುತ್ತಾರೆ, ಕಲ್ಲು ಗಣಿಗಾರಿಕೆ, ಇಟ್ಟಿಗೆ ಕಾರ್ಖಾನೆಗಳಲ್ಲಿ ಹೆಚ್ಚಾಗಿ ಜೀತ ಪದ್ದತಿ ಹೆಚ್ಚಾಗಿ ಕಂಡು ಬರುತ್ತದೆ ಎಂದರು. ಮಕ್ಕಳ ಪೋಷಕರ ಜ್ಞಾನದ ಕೊರೆತೆಯಿಂದ, ಮನೆಯ ಪರಿಸ್ಥಿತಿಯಿಂದಲೂ ಮಕ್ಕಳನ್ನು ಜೀತಕ್ಕೆ ಕಳುಹಿಸಲಾಗುತ್ತಿದೆ ಎಂದರು.
ಕರ್ನಾಟಕ ಪಂಚಾಯತ್ ರಾಜ್ ಆ್ಯಕ್ಟ್ 58ರ ಪ್ರಕಾರ ಜೀತ ಪದ್ದತಿ ನಿರ್ಮೂಲನೆ ಮಾಡುವುದು ಕಡ್ಡಾಯ ಪ್ರಕಾರ್ಯದಲ್ಲಿ ಒಂದಾಗಿದೆ ಎಂದರು.
ತಾಪಂ ಸಹಾಯಕ ನಿರ್ದೇಶಕ ಪಂಚಾಯತ್ ರಾಜ್ ಹರೀಶ್ ಕರ್ನಾಟಕವನ್ನು ಜೀತ ವಿಮುಕ್ತಿಗೊಳಿಸುವ ಬಗ್ಗೆ ಪ್ರತಿಜ್ಞೆ ಬೋದಿಸಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಪಾಟಿದಾರ್, ತಾಪಂ ಸಿಬ್ಬಂದಿಗಳು ಇದ್ದರು.