ಬಾಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ರಸ್ತೆ ಯಲ್ಲೇ ಪ್ರತಿಭಟನೆಗೆ ಮುಂದಾದ ಮಹಿಳೆಯರು ಹಾಗೂ ಕರವೇ ಕಾರ್ಯಕರ್ತರು.
ತಾಲೂಕಿನ ಬಾಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲ ಹಳ್ಳಿಗಳಲ್ಲಿ ಅನಾಧಿಕೃತವಾಗಿ ಕೆಲವರು ಮಧ್ಯ ಮಾರಾಟ ಮಾಡುತ್ತಿದ್ದಾರೆ ಎಂದು ವಿವಿಧ ಸ್ವ ಸಹಾಯ ಸಂಘ, ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರು ಹಾಗೂ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದ ಘಟನೆ ಗುರುವಾರ ನೆಡೆಯಿತು.
ಅರಸುನಗರ, ಯಡೇಹಳ್ಳಿ, ಬಾಗೆ ಗ್ರಾಮದ ಕೆಲವು ಮನೆಗಳು, ಗೂಡಂಗಡಿಗಳಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡಿದರೂ ಕೂಡ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಸ್ಥಳೀಯ ಮಹಿಳೆಯರ ನೋವಾಗಿದೆ.
ಸಂಘದ ಸದಸ್ಯರಾಗಿರುವ ಮಹಿಳೆಯರು, ಕೆಲವು ದಿನಗಳ ಹಿಂದೆ ಅನಾಧಿಕೃತ ಮದ್ಯ ಮಾರಾಟ ತಡೆಯುವಂತೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಲಿಖಿತವಾಗಿ ಮನವಿ ನೀಡಿದ್ದರು. ಆದರೆ, ಯಾವುದೇ ಕ್ರಮ ಜರುಗದ ಕಾರಣ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ನಡೆಯುತ್ತಿರುವ ಇಂತಹ ಅನೇಕ ಕಾನೂನು ಬಾಹಿರ ಚಟುವಟಿಕೆಗಳಿಗೆ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದು ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಸಕಲೇಶಪುರ ಡಿ.ವೈ.ಎಸ್ಪಿ ಹಾಗೂ ಉಪ ವಿಭಾಗಾಧಿಕಾರಿಗಳು ಬಾಗೆ ಗ್ರಾಮದಲ್ಲೇ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಬೇಕು ಎಂದು ಮಹಿಳೆಯರು ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯತಿ ಅಧ್ಯಕ್ಷ ಜಯಶಂಕರ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ದಿನಗಳಲ್ಲಿ ಬಾಗೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮಧ್ಯ ಮಾರಾಟ ತಡೆಯಲು ಮುಂದಾಗುತ್ತೇವೆ ಎಂದು
ಮಹಿಳಾ ಸಂಘದ ಸದಸ್ಯರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ.
ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ, ಜನನಿ ಮಹಿಳಾ ಸಮಾಜದ ಅಧ್ಯಕ್ಷೆ ರೂಪ ರಾಜೇಶ್, ಮಹಿಳಾ ಸಂಘದ ಪದಾಧಿಕಾರಿಗಳಾದ ಸೌಜನ್ಯ, ವನಜಾಕ್ಷಿ, ಸೇರಿದಂತೆ ಗ್ರಾಮಸ್ಥರು, ಪುರುಷರ ಸಂಘದ ಸದಸ್ಯರು ಇದ್ದರು