ಸಕಲೇಶಪುರ :ಪಟ್ಟಣದ ಗ್ರಾಮ ದೇವತೆ ಶ್ರೀ ಕೊಪ್ಪಲು ಮಾರಮ್ಮ ದೇವಿಯ ಸುಗ್ಗಿ ಹಾಗೂ ಕೆಂಡೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿ ವಿಜೃಂಭಣೆಯಿಂದ ಜರುಗಿತು.
ನೂರಾರು ವರ್ಷಗಳ ಇತಿಹಾಸ ಇರುವ ಕೊಪ್ಪಲು ಮಾರಮ್ಮ ಎಂದು ಖ್ಯಾತಿಯಾಗಿರುವ ಗ್ರಾಮ ದೇವತೆಗೆ ಮಂಗಳವಾರ ವಿಶೇಷ ಪೂಜೆ ನೆರವೇರಿಸಿ ಪವಿತ್ರ ಹೇಮಾವತಿ ನದಿಯಿಂದ ಗಂಗೆ ತರುವ ಮೂಲಕ ಸುಗ್ಗಿ ಹಬ್ಬ ಆರಂಭವಾಗಿತ್ತು .
ಶುಕ್ರವಾರ ದೇವಿಯನ್ನು ಊರಾಡಿಸಿ ಸಂಜೆ ವಿದ್ಯುತ್ ದೀಪಾಲಂಕಾರದಲ್ಲಿ ರಾಜ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಶುಕ್ರವಾರ ರಾತ್ರಿ ಅಮ್ಮನವರಿಗೆ ಪೂಜೆ ನೆರವರಿಸಿ ಕೆಂಡೊತ್ಸವ ಹಾಗೂ ವಿಶೇಷ ಸುಗ್ಗಿ ಕುಣಿತ ಕಾರ್ಯಕ್ರಮ ನಡೆದಿದ್ದು ಸಾವಿರಾರು ಭಕ್ತರು ಪಾಲ್ಗೊಂಡರು.
ಶನಿವಾರ ಮುಂಜಾನೆ ನೂರಾರು ಭಕ್ತರು ಅಮ್ಮನವರ ಕೆಂಡೋತ್ಸವದ ಕೆಂಡದ ಮೇಲೆ ಬರಿ ಕಾಲಿನಲ್ಲಿ ನಡೆದು ತಮ್ಮ ಭಕ್ತಿಯ ಹರಕೆಯನ್ನು ದೇವಿಗೆ ಅರ್ಪಿಸಿ ಪುನೀತರಾದರು . ಶನಿವಾರ ರಾತ್ರಿ ಮಾರಮ್ಮ ದೇವಿಯ ಬಂಟರಾದ ಭೂತರಾಯ ,ಕರಿರಾಯ ಹಾಗೂ ಕೆಂಚರಾಯರಿಗೆ ಕೋಳಿ ಯನ್ನು ಒಪ್ಪಿಸಿ ದೂಲ್ಮಮರಿ ಹರಕೆಯನ್ನು ಸಹ ಅರ್ಪಿಸಿದ್ದು ಭಾನುವಾರ ಮಧ್ಯಾಹ್ನ ಸಾವಿರಾರು ಭಕ್ತ ರಿಗೆ ಅನ್ನ ಸಂತರ್ಪಣೆ ನಡೆಯಲಿದೆ.