- ಸಕಲೇಶಪುರ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭ : ಉತ್ಸಾಹದಿಂದ ಪರೀಕ್ಷಾ ಕೇಂದ್ರಕ್ಕೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು.
ಸಕಲೇಶಪುರ : ದ್ವಿತೀಯ ಪಿಯು ಪರೀಕ್ಷೆಗಳು ಆರಂಭಗೊಂಡ ಮೊದಲ ದಿನ ವಿದ್ಯಾರ್ಥಿಗಳಲ್ಲಿ ಆತಂಕ ಮನೆಮಾಡಿತ್ತು. ಮೊದಲ ದಿನ ತಮ್ಮ ಪೋಷಕರೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ ವಿದ್ಯಾರ್ಥಿಗಳು ಆತಂಕದಿಂದಲೇ ಕೊಠಡಿ ಸಂಖ್ಯೆಯನ್ನು ಗಮನಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಪರೀಕ್ಷಾ ಕೇಂದ್ರಗಳಿಗೆ ಅರ್ಧ ತಾಸಿಗೆ ಮುಂಚಿತವಾಗಿ ಬಹುತೇಕ ವಿದ್ಯಾರ್ಥಿಗಳು ಬಂದು ತಲುಪಿ, ತಮ್ಮ ಕೊಠಡಿ ಸಂಖ್ಯೆಗಳನ್ನು ಹಾಗೂ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ನೀಡುತ್ತಿದ್ದ ಸೂಚನೆಗಳನ್ನು ಕೇಳುವುದರಲ್ಲಿ ಮಗ್ನರಾಗಿದ್ದರು.
ಈ ಬಾರಿ ತಾಲೂಕಿನಲ್ಲಿ ಒಂದು ಪರೀಕ್ಷಾ ಕೇಂದ್ರ ತೆರೆದಿದ್ದು ಸರ್ಕಾರಿ ಹಾಗೂ ಖಾಸಗಿ ಶಾಲೆಯ ಒಟ್ಟು 762 ವಿದ್ಯಾರ್ಥಿಗಳ ಪೈಕಿ 488 ವಿದ್ಯಾರ್ಥಿಗಳು ಕನ್ನಡ ಪರೀಕ್ಷೆ ಬರೆಯುತ್ತಿದ್ದಾರೆ. ಇಂದು ಕನ್ನಡ ವಿಷಯ ಕ್ಕೆ ಹಾಗೂ ಹಿಂದಿ ವಿಷಯಕ್ಕೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಉತ್ಸಹದಿಂದ ಸಕಲ ಸಿದ್ಧತೆಯೊಂದಿಗೆ ಪರೀಕ್ಷಾ ಕೇಂದ್ರದ ಕಡೆ ಹೆಜ್ಜೆ ಹಾಕಿದ್ದಾರೆ.
ನಿಷೇಧಾಜ್ಞೆ ಜಾರಿ: ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಕೇಂದ್ರಗಳ ಸುತ್ತಮುತ್ತ ಪರೀಕ್ಷೆ ನಡೆಯುವ ದಿನ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ 200 ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಅಲ್ಲದೇ, ಕೇಂದ್ರಗಳ ಅಕ್ಕಪಕ್ಕದ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸಣ್ಣಪುಟ್ಟ ಗೊಂದಲಕ್ಕೂ ಅವಕಾಶವಾಗದಂತೆ ಎಚ್ಚರ ವಹಿಸಲಾಗಿದೆ. ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ಗುರುತಿನ ಚೀಟಿ ನೀಡಲಾಗಿದೆ. ಗುರುತಿನ ಚೀಟಿ ಇಲ್ಲದ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶ ನಿರ್ಬಂಧಿಸಲಾಗುತ್ತದೆ.
ಮೊಬೈಲ್ ನಿಷೇಧ: ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ಪೋನ್, ಇ-ಕ್ಯಾಮೆರಾ, ಎಲೆಕ್ಟ್ರಾನಿಕ್ ಕೈಗಡಿಯಾರ, ಲ್ಯಾಪ್‍ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ. ಕೊಠಡಿ ಮೇಲ್ವಿಚಾರಕರು ಸಹ ಮೊಬೈಲ್ ಬಳಸುವಂತಿಲ್ಲ. ತುರ್ತು ಸಂದರ್ಭದಲ್ಲಿ ಕೇಂದ್ರದ ಮುಖ್ಯ ಅಧೀಕ್ಷಕರಿಗೆ ಮಾತ್ರ ಮೊಬೈಲ್ ಬಳಸಲು ಅವಕಾಶವಿದೆ.